ಹೊಸ ವರ್ಷಾಚರಣೆ ಸಂಭ್ರಮದಲ್ಲಿರುವ ಬೆಂಗಳೂರಿಗರಿಗೆ ಡಿಸೆಂಬರ್ 31 (ಇಂದು) ರಂದು ಮೆಟ್ರೂ ರೈಲು ಸೇವೆ ರಾತ್ರಿ ಮೂರು ಗಂಟೆವರೆಗೆ ಲಭ್ಯವಿರುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಯಾವ ಮಾರ್ಗಗಳಲ್ಲಿ ಎಷ್ಟು ಗಂಟೆಗೆ ಕೊನೆಯ ಮೆಟ್ರೋ ಸಂಚಾರ ಮಾಡಲಿದೆ ಎಂಬ ಮಾಹಿತಿ ಜೊತೆಗೆ ಯಾವ ನಿಲ್ದಾಣದಿಂದ ಕೊನೆಯ ರೈಲು ಎಷ್ಟು ಗಂಟೆಗೆ ಹೊರಡಲಿದೆ ಎಂದೂ ತಿಳಿಸಿದೆ.’
31 ಡಿಸೆಂಬರ್ 2025ರ ಮಧ್ಯರಾತ್ರಿಯ ನಂತರ 1ನೇ ಜನವರಿ 2026ರಂದು ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ಮೆಟ್ರೋ ರೈಲುಗಳ ಸಮಯ ಹೀಗಿದೆ,
ನೇರಳೆ ಮಾರ್ಗ: ವೈಟ್‌ಫೀಲ್ಡ್ ನಿಂದ ಚಲ್ಲಘಟ್ಟ – ಬೆಳಗಿನ ಜಾವ 1:45ಗಂಟೆ, ಚಲ್ಲಘಟ್ಟದಿಂದ ವೈಟ್‌ಫೀಲ್ಡ್ – ಬೆಳಗಿನ ಜಾವ 2 ಗಂಟೆ, ಹಸಿರು ಮಾರ್ಗ: ಮಾದಾವರದಿಂದ ರೇಷ್ಮೆ ಸಂಸ್ಥೆ – ಬೆಳಗಿನ ಜಾವ 2 ಗಂಟೆ, ರೇಷ್ಮೆ ಸಂಸ್ಥೆಯಿಂದ ಮಾದಾವರ: ಬೆಳಗಿನ ಜಾವ 2:00 ಗಂಟೆ, ಹಳದಿ ಮಾರ್ಗ: ಆ.ರ್‌ವಿ ರಸ್ತೆಯಿಂದ ಬೊಮ್ಮಸಂದ್ರ – ಬೆಳಗಿನ ಜಾವ 3:10 ಗಂಟೆ, ಬೊಮ್ಮಸಂದ್ರದಿಂದ ಆರ್‌ವಿ ರಸ್ತೆ – ಬೆಳಗಿನ ಜಾವ 1:30 ಗಂಟೆಗೆ ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣ: ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ಬೆಳಗಿನ ಜಾವ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನಿಂದ ಹೊರಡಲಿದೆ.
31ನೇ ಡಿಸೆಂಬರ್ 2025ರ ರಾತ್ರಿ 11:30ರಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಎಂ.ಜಿ ರಸ್ತೆ ಪ್ರದೇಶದಲ್ಲಿ ರಾತ್ರಿ 10 ರಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ರೈಲುಗಳು ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದ್ದು, ಪ್ರಯಾಣಿಕರು ಅಲ್ಲಿ ರೈಲು ಹಿಡಿಯಬೇಕು.
ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11 ರ ನಂತರ ಟೋಕನ್ ಮಾರಾಟ ಇರುವುದಿಲ್ಲ. ರಾತ್ರಿ 11 ಗಂಟೆಯ ನಂತರ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸಬೇಕು ಅಥವಾ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಬೇಕು.


