ಗುಡ್ಡಗಾಡನ್ನು ಆಪೋಶನ ತೆಗೆದುಕೊಳ್ಳುವ ಮಹಾವಂಚಕರು, ಕೆರೆ, ಕುಂಟೆಗಳ ನುಂಗಣ್ಣರ ಸಂಖ್ಯೆಯಿಂದು ದೇಶದಲ್ಲಿ ವ್ಯಾಪಕವಾಗಿ ಬೆಳೆದಿದೆ. ಸರ್ಕಾರದ ವರಮಾನ ಹೆಚ್ಚಲಿದೆ ಎಂಬ ನೆಪದಲ್ಲಿ ಅರಣ್ಯ ಸಂರಕ್ಷಣೆ ಕಾಯಿದೆಗೆ ಕೈ ಹಾಕಿ ಅದನ್ನು ವಿಕೃತಗೊಳಿಸುವ ಕೇಂದ್ರ ಸರ್ಕಾರದ ಪ್ರವೃತ್ತಿ ಮತ್ತು ತಂತ್ರಗಾರಿಕೆಯನ್ನು ಸುಪ್ರೀಂಕೋರ್ಟ್ ಹೇಗೆ ತಾನೆ ಒಪ್ಪಲು ಸಾಧ್ಯ?
ಅರಾವಳಿ ಪರ್ವತ ಶ್ರೇಣಿ ಹಾಗೂ ಗಣಿಗಾರಿಕೆಯ ವಿಷಯವೀಗ ದೇಶದಲ್ಲಿ ಭಾರಿ ಸದ್ದು ಮಾಡಿದೆ . ಈ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರಿಯಬೇಕೇ, ಬೇಡವೇ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರವೀಗ ಸುಪ್ರೀಂಕೋರ್ಟ್ ಆದೇಶಗಳಿಗೆ ಕಾಯುವಂತಾಗಿದೆ.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅರಣ್ಯ ವಲಯದ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇದುವರೆಗೆ ನೀಡಿರುವ ತೀರ್ಪುಗಳೆಲ್ಲವೂ ಮಹತ್ವಪೂರ್ಣ. ಗೋದಾವನ್ ಮರ್ಮ ಪ್ರಕರಣದಲ್ಲಿ ದೇಶದ ಮೀಸಲು ಅರಣ್ಯ ಅರಣ್ಯ ವಲಯಗಳಲ್ಲಿ ಮಾನವನಿರ್ಮಿತ ಚಟುವಟಿಕೆಗಳು ಸಲ್ಲದು ಎಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಅರಣ್ಯ ಉದಾರಿಕರಣದ ಸರ್ಕಾರಗಳ ನೀತಿ, ನಿಯಮಾವಳಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು ಗಮನಾರ್ಹ. ಕಾಲಕಾಲಕ್ಕೆ ಸರ್ಕಾರಗಳು ಬದಲಾ ದಂತೆ ಅರಣ್ಯ ಸಂರಕ್ಷಣೆಯ ಹಲವು ಹತ್ತು ಬಿಗಿ ನಿಯಮಾವಳಿಗಳೂ ಸಡಿಲಗೊಂಡಿದ್ದು ಕಟುವಾಸ್ತವ. ಆದರೆ ಸರ್ಕಾರಗಳ ಇಂತಹ ಸಡಿಲ ನೀತಿಗಳಿಂದ ದೇಶದ ಅಮೂಲ್ಯ ಅರಣ್ಯ ಸಂಪತ್ತು ಮತ್ತು ಜೈವಿಕ ವೈವಿಧ್ಯತೆ ನಾಶವಾಗುತ್ತದೆ ಎಂಬ ಪೂರ್ವಾಲೋಚನೆಯಿಂದ ಸುಪ್ರೀಂಕೋರ್ಟ್ ತನ್ನ ಸುಮೋಟೋ ಅಧಿಕಾರವನ್ನು ಬಳಸಿ ಅರಣ್ಯ ಸಂರಕ್ಷಣೆಗೆ ಟೊಂಕಕಟ್ಟಿದೆ.
ಅರಾವಳಿ ಗಿರಿಶ್ರೇಣಿಯಲ್ಲಿ ಸುಮಾರು ಒಂದು ನೂರು ಮೀಟರ್ ಎತ್ತರದವರೆಗೂ ಅಂತಹ ಪ್ರದೇಶಗಳಲ್ಲಿ ಗಣಿಗಾರಿಕೆ ಮುಂದುವರಿಯಬಹುದು ಎಂಬ ಕೇಂದ್ರದ ಹೇಳಿಕೆಗೆ ದೇಶದ ಕೆಲ ಪ್ರಮುಖ ಪರಿಸರ ಸಂರಕ್ಷಣೆಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಈ ತೀರ್ಮಾನವು ಕೇವಲ ಅರಾವಳಿ ಶ್ರೇಣಿಗಳಿಗೆ ಮಾತ್ರವಲ್ಲ. ಇದು ದೇಶದ ಜೈವಿಕ ವೈವಿಧ್ಯಮಯ ಅರಣ್ಯ ಪ್ರದೇಶಗಳ ಮೇಲೆ ಎರಗುವ ದುರಾಕ್ರಮಣ. ಸರ್ಕಾರದ ಕೆಟ್ಟ ಮತ್ತು ದೋಷಪೂರಿತ ತೀರ್ಮಾನಗಳಿಂದ ದೇಶದ ಸಂಪತ್‌ಭರಿತ ಅರಣ್ಯವೆಲ್ಲವೂ ಮುಂದೊಂದು ದಿನ ಬರಡು ನೆಲವಾಗುವುದು ಖಂಡಿತ ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ. ಸೋಮವಾರದಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪರಿಸರ ತಜ್ಞರ ಅಭಿಪ್ರಾಯವನ್ನು ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ಒಟ್ಟಿನಲ್ಲಿ ಸಾಂವಿಧಾನಿಕ ಕೋರ್ಟುಗಳ ಹಸ್ತಕ್ಷೇಪದಿಂದ ಮಾತ್ರವೇ ಈ ದೇಶದಲ್ಲಿ ಗುಡ್ಡಗಾಡು, ಕೆರೆ, ಕುಂಟೆ ಮತ್ತು ನದಿಗಳು ಜೀವಂತವಾಗಿರಲು ಸಾಧ್ಯವಾಗಿದೆ.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ದಿಶೆಯಲ್ಲಿ ಸರ್ಕಾರ ಕೈಗೊಳ್ಳುವ ತೀರ್ಮಾನಗಳು ಅರಣ್ಯ ಸಂರಕ್ಷಣೆಗೆ ಮಾರಕವಾದರೆ ಇದನ್ನು ದೇಶದ ಉನ್ನತ ನ್ಯಾಯಸ್ಥಾನವೇ ನಿಯಂತ್ರಿಸಲು ಸಾಧ್ಯ. ದಿನಗಳು ಉರುಳಿದಂತೆ ಗುಡ್ಡಗಾಡನ್ನು ಆಪೋಶನ ತೆಗೆದುಕೊಳ್ಳುವ ಮಹಾವಂಚಕರು, ವಿಧ್ವಂಸಕರು ಮತ್ತು ಕೆರೆ, ಕುಂಟೆಗಳ ನುಂಗಣ್ಣರ ಸಂಖ್ಯೆಯಿಂದು ಬೆಳೆಯತೊಡಗಿದೆ. ಸರ್ಕಾರಕ್ಕೆ ವರಮಾನ ಹೆಚ್ಚುವುದೆಂಬ ನೆಪದಲ್ಲಿ ಮೂಲ ಅರಣ್ಯ ಕಾಯಿದೆಯನ್ನು ಬದಲಿಸುವ ಸರ್ಕಾರಗಳ ತಂತ್ರಗಾರಿಕೆಯ ನೀತಿ ಸುಪ್ರೀಂಕೋರ್ಟಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಗುಡ್ಡಗಾಡನ್ನು ಸಂಪೂರ್ಣ ನಾಶಗೊಳಿಸಿ ಸರ್ಕಾರ ಗಳಿಸುವ ವರಮಾನವಂತೂ ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಲ್ಲ. ನೆಲದ ಹಿತ ಮಿತ ಮತ್ತು ಇದರ ಸುತ್ತಲೂ ಅವರಿಸಿರುವ ಬೆಟ್ಟ, ಗುಡ್ಡ ಮತ್ತು ಅರಣ್ಯದ ಸಮತೋಲನ ಕಾಪಾಡುವುದೂ ಅತಿ ಮುಖ್ಯ.


