ಮಾಜಿ ಸಚಿವರಾದ ಶಾಸಕ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯ “ಕರ್ನಾಟಕ ಆಡಳಿತಾ ಸುಧಾರಣಾ ಆಯೋಗ”ದ 10ನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸದಲ್ಲಿ ಸಲ್ಲಿಸಲಾಯಿತು. ಸಚಿವರಾದ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಆಯೋಗದ ಹಿನ್ನೆಲೆ ಮತ್ತು ರಚನೆ : ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಗಳು, ಸೇವಾ ವಿತರಣಾ ಕಾರ್ಯವಿಧಾನಗಳು (Service Delivery Mechanisms), ಸಾಂಸ್ಥಿಕ ರಚನೆಗಳು ಮತ್ತು ಆಡಳಿತ ಪ್ರಕ್ರಿಯೆಗಳ ಸಮಗ್ರ ಪರಿಶೀಲನೆ ನಡೆಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜನವರಿ 2021ರಲ್ಲಿ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2’ನ್ನು ರಚಿಸಿತು. 21ನೇ ಶತಮಾನದ ಆಡಳಿತಾತ್ಮಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಪಾರದರ್ಶಕತೆ (Transparency), ಹೊಣೆ ಗಾರಿಕೆ (Accountability), ದಕ್ಷತೆ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿತ್ತು.
ಜನವರಿ 2024ರಲ್ಲಿ, ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ಆರ್. ವಿ. ದೇಶಪಾಂಡೆ ಅವರನ್ನು ಸಂಪುಟ ದರ್ಜೆಯ ಸಚಿವರ (Cabinet Minister status) ಸ್ಥಾನಮಾನದೊಂದಿಗೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರ ನೇತೃತ್ವದಲ್ಲಿ ಆಯೋಗವು ವಿವಿಧ ಇಲಾಖೆಗಳೊಂದಿಗೆ ತೀವ್ರಗತಿಯ ಪರಿಶೀಲನೆ, ಅನುಷ್ಠಾನದ ವ್ಯವಸ್ಥಿತ ಮೇಲ್ವಿಚಾರಣೆ (Systematic Follow-up) ಮತ್ತು ಹಿರಿಯ ರಾಜಕೀಯ ಹಾಗೂ ಆಡಳಿತಾತ್ಮಕ ಅಧಿಕಾರಿಗಳೊಂದಿಗೆ ಸಮಾ ಲೋಚನೆ ನಡೆಸುವ ಮೂಲಕ ಸುಧಾರಣಾ ಕಾರ್ಯಸೂಚಿಯನ್ನು ಚುರುಕುಗೊಳಿಸಿತು. ಆಯೋಗವು ಮೇ 2025ರಲ್ಲಿ 8ನೇ ವರದಿ, ಅಕ್ಟೋಬರ್ 2025ರಲ್ಲಿ 9ನೇ ವರದಿಯನ್ನು ಸಲ್ಲಿಸಿದ್ದು, ಇದೀಗ ಡಿಸೆಂಬರ್ 2025ರಲ್ಲಿ 10ನೇ ವರದಿಯನ್ನು ಸಲ್ಲಿ ಸುವ ಮೂಲಕ ತನ್ನ ಕಾರ್ಯಾದೇಶವನ್ನು (Mandate) ಪೂರ್ಣಗೊಳಿಸಿದೆ.
10ನೇ ವರದಿಯ ವ್ಯಾಪ್ತಿ ಮತ್ತು ಆದ್ಯತೆ :ಆಯೋಗದ 10ನೇ ವರದಿಯು ಹಿಂದಿನ ವರದಿಗಳಲ್ಲಿ ಸೇರ್ಪಡೆಯಾಗದ ಕೆಲವು ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ.
ಮೊದಲ ಆಡಳಿತ ಸುಧಾರಣಾ ಆಯೋಗ ಮತ್ತು KARC-2ರ ಶಿಫಾರಸುಗಳ ಅನುಷ್ಠಾನದ ಸ್ಥಿತಿಗತಿಯ ಪರಿಶೀಲನೆ. ಆರ್ಥಿಕ ಹಂಚಿಕೆ ಮತ್ತು ಪ್ರಸ್ತುತತೆಯ ಆಧಾರದ ಮೇಲೆ ರಾಜ್ಯ ವಲಯದ ಯೋಜನೆಗಳ (State Sector Schemes) ವೈಜ್ಞಾನಿಕ ಮರುಜೋಡಣೆ, ವಿಲೀನ ಮತ್ತು ರದ್ದತಿ. ಕೆಲಸದ ಹೊರೆ (Workload Assessment) ಮತ್ತು ಸೇವಾ ವಿತರಣಾ ಅಗತ್ಯತೆಗಳ ಆಧಾರದ ಮೇಲೆ ವಿವಿಧ ವೃಂದ (Cadre) ಮತ್ತು ಇಲಾಖೆಗಳಲ್ಲಿ ಸಿಬ್ಬಂದಿಗಳ ಮರುಹಂಚಿಕೆ (Redeployment). ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಮತ್ತು ಇಲಾಖಾವಾರು ಶಿಫಾರಸುಗಳು.
ಶಿಫಾರಸುಗಳ ಅನುಷ್ಠಾನದ ಪ್ರಗತಿ (Status of Implementation): 2024-25ರ ಅವಧಿಯಲ್ಲಿ ಆಯೋಗವು ಶಿಫಾರಸುಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಾನ್ಯ ಅಧ್ಯಕ್ಷರು ಮುಖ್ಯಮಂತ್ರಿಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಡಿ.ಓ. ಪತ್ರಗಳನ್ನು (D.O. letters) ಬರೆದಿದ್ದಾರೆ.
2,014 ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ. 186 ಶಿಫಾರಸುಗಳನ್ನು ಆಂಶಿಕವಾಗಿ (Partly implemented) ಜಾರಿಗೆ ತರಲಾಗಿದೆ. 839 ಶಿಫಾರಸುಗಳು ಸಕ್ರಿಯ ಅನುಷ್ಠಾನದ ಹಂತದಲ್ಲಿವೆ. 2,274 ಶಿಫಾರಸುಗಳನ್ನು ಇಲಾಖೆಗಳು ಪರಿಶೀಲಿಸುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲೇ ಸುಮಾರು 200 ಶಿಫಾರಸುಗಳನ್ನು ಜಾರಿಗೆ ತರಲಾಗಿದೆ.
ರಾಜ್ಯ ವಲಯದ ಯೋಜನೆಗಳ ವೈಜ್ಞಾನಿಕ ಮರುಜೋಡಣೆ (Rationalisation of Schemes): ಯೋಜನಾ ಇಲಾಖೆಯ ದತ್ತಾಂಶಗಳ ಆಧಾರದ ಮೇಲೆ ಸರ್ಕಾರವು ನಿರ್ವಹಿಸುತ್ತಿರುವ 2,874 ಲೆಕ್ಕ ಶೀರ್ಷಿಕೆಗಳನ್ನು (Heads of Account – HOAs) ಆಯೋಗವು ವಿವರವಾಗಿ ಪರಿಶೀಲಿಸಿದೆ.
ಸುಮಾರು 1,000 ಲೆಕ್ಕ ಶೀರ್ಷಿಕೆಗಳಲ್ಲಿ ಶೂನ್ಯ ಅಥವಾ ಅತ್ಯಲ್ಪ ಹಂಚಿಕೆ ಕಂಡುಬಂದಿದೆ. ಸುಮಾರು 280 ಯೋಜನೆಗಳಿಗೆ 1 ಕೋಟಿ ರೂ.ಗಿಂತ ಕಡಿಮೆ ಹಂಚಿಕೆ ಇದ್ದು, ಇವುಗಳ ಹಂಚಿಕೆಯು ಭಾರಿ ಕುಸಿತ ಕಂಡಿದೆ. ಅನೇಕ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ (Centrally Sponsored Schemes) ಹೋಲಿಕೆ ಹೊಂದಿವೆ. ಆದ್ದರಿಂದ ಇಂತಹ ಯೋಜನೆಗಳನ್ನು ಸ್ಥಗಿತಗೊಳಿಸಲು, ವಿಲೀನಗೊಳಿಸಲು ಅಥವಾ ಮರುಜೋಡಣೆ ಮಾಡಲು ಆಯೋಗವು ಶಿಫಾರಸು ಮಾಡಿದೆ. ಸಿಬ್ಬಂದಿಗಳ ಮರುಹಂಚಿಕೆ ಮತ್ತು ಸುಧಾರಣೆ (Redeployment of Staff): ಇಲಾಖೆಗಳು, ಮಂಡಳಿ ಮತ್ತು ನಿಗಮಗಳಲ್ಲಿನ ಮಂಜೂರಾದ, ಭರ್ತಿಯಾದ ಮತ್ತು ಹೊರಗುತ್ತಿಗೆ (Outsourced) ಹುದ್ದೆಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ.
ಕೆಲಸದ ಹೊರೆ ಕಡಿಮೆ ಇರುವ ಘಟಕಗಳಿಂದ ಸಿಬ್ಬಂದಿಗಳನ್ನು ಅಗತ್ಯವಿರುವ ಕಡೆಗಳಿಗೆ ಮರುಹಂಚಿಕೆ ಮಾಡುವುದು. ಪ್ರಸ್ತುತ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಪಡಿಸುವುದು ಅಥವಾ ತಾಂತ್ರಿಕ ಹುದ್ದೆಗಳಾಗಿ ಪರಿವರ್ತಿಸುವುದು. ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದಗಳ ಅನಿಯಂತ್ರಿತ ವಿಸ್ತರಣೆಗೆ ಕಡಿವಾಣ ಹಾಕುವುದು.
ಸಾಂಸ್ಥಿಕ ಶಿಫಾರಸುಗಳು
ಆಯೋಗದ ಅವಧಿ ಮುಗಿದ ನಂತರವೂ ಅನುಷ್ಠಾನದ ಮೇಲೆ ನಿರಂತರ ನಿಗಾ ಇರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ (DPAR-AR) ‘ಸುಧಾರಣಾ ಮೇಲ್ವಿಚಾರಣಾ ಘಟಕ’ (Reform Monitoring Unit – RMU) ಸ್ಥಾಪಿಸುವುದು. ಆನ್‌ಲೈನ್ ಟ್ರ್ಯಾಕಿಂಗ್ ಪೋರ್ಟಲ್ (Online tracking portal) ಮೂಲಕ ಪಾರದರ್ಶಕ ಮೇಲ್ವಿಚಾರಣೆ ಮುಂದುವರಿಸುವುದು.
ಒಟ್ಟಾರೆ ಕೊಡುಗೆ ಮತ್ತು ಸಮಾರೋಪ: 10ನೇ ವರದಿಯು 355 ಹೊಸ ಶಿಫಾರಸುಗಳನ್ನು ಒಳಗೊಂಡಿದ್ದು, ಆಯೋಗವು ಒಟ್ಟು 10 ವರದಿಗಳ ಮೂಲಕ 42 ಇಲಾಖೆಗಳಿಗೆ ಸಂಬಂಧಿಸಿದಂತೆ 6,000 ಕ್ಕೂ ಹೆಚ್ಚು ಶಿಫಾರಸುಗಳನ್ನು ನೀಡಿದೆ. 10ನೇ ವರದಿಯನ್ನು ಸಲ್ಲಿಸುವುದರೊಂದಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ. ಸುಧಾರಣೆಗಳ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಲು ಮತ್ತು ಆಡಳಿತ ಸುಧಾರಣೆಯ ನಿರಂತರತೆ ಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ.


