ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಡುರೊವ್ 37 ವರ್ಷದೊಳಗಿನ ಮಹಿಳೆಯರಿಗೆ ವೀರ್ಯವನ್ನು ದಾನವಾಗಿ ನೀಡುವುದಾಗಿ ಹೇಳಿ ತಾಯಿಯಾಗಲು ಆಹ್ವಾನಿಸಿದ್ದಾರೆ. ಈ ಪ್ರಕ್ರಿಯೆಯ ಸಂಪೂರ್ಣ ಐವಿಎಫ್ ವೆಚ್ಚವನ್ನು ಭರಿಸುವ ಜೊತೆಗೆ ಈ ವೀರ್ಯದಿಂದ ಜನಿಸುವ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಪಾಲು ನೀಡುವುದಾಗಿಯೂ ಘೋಷಿಸಿದ್ದಾರೆ.
ಪಾವೆಲ್ ಡುರೊವ್ 37 ವರ್ಷದೊಳಗಿನ ತಾಯಿಯಾಗಲು ಬಯಸುವ ಮಹಿಳೆಯರಿಗೆ ಈ ಆಹ್ವಾನ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಪಾವೆಲ್ ಡುರೊವ್ ಈಗಾಗಲೇ 12 ದೇಶಗಳಲ್ಲಿ ವೀರ್ಯ ದಾನದ ಮೂಲಕ ಹಾಗೂ ಮೂರು ವಿವಾಹ ಸಂಬಂಧಗಳಿಂದ ಒಟ್ಟು ಆರು ಮಕ್ಕಳನ್ನು ಮತ್ತು 100 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತಮ್ಮ ಎಲ್ಲಾ ಮಕ್ಕಳು ತಮ್ಮ ಸಂಪತ್ತಿನಲ್ಲಿ ಸಮಾನ ಪಾಲು ಪಡೆಯುತ್ತಾರೆ ಎಂದು ಹೇಳಿದ್ದಾಗಿ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
$17 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಆಸ್ತಿ ಹೊಂದಿರುವ ಪಾವೆಲ್ ಡುರೊವ್ ರಷ್ಯಾದ ಸೋಶಿಯಲ್ ಮೀಡಿಯಾ ವಿಕೆ ಆರಂಭಿಸಿದ ನಂತರ 2013 ರಲ್ಲಿ ಟೆಲಿಗ್ರಾಮ್ ಸ್ಥಾಪಿಸಿದ್ದರು. ಮೊದಲಿಗೆ ಅವರು ಸ್ನೇಹಿತನಿಗೆ ಗೆ ಸಹಾಯ ಮಾಡಲು ವೀರ್ಯ ದಾನ ಮಾಡಲು ಪ್ರಾರಂಭಿಸಿದರು. ಪುರುಷ ಬಂಜೆತನ ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆ ಅವರು ಈ ವೀರ್ಯದಾನ ಕಾರ್ಯವನ್ನು ಮುಂದುವರಿಸಿದ್ದಾರೆ.
ಈ ಹಿಂದೆ ಮಾಡಿರುವ ವೀರ್ಯದಾನದ ಮಾದರಿಗಳು ಮಾಸ್ಕೋ ಚಿಕಿತ್ಸಾಲಯದಲ್ಲಿ ಸಂಗ್ರಹವಿದ್ದು, ಅಗತ್ಯವಿರುವ 37 ವರ್ಷದೊಳಗಿನ ಅವಿವಾಹಿತ ಮಹಿಳೆಯರಿಗೆ ನೀಡಲಾಗುತ್ತದೆ. ಕಳೆದ ವರ್ಷ ಅವರ ವೀರ್ಯ ದಾನದ ವಿಚಾರವೂ ರಷ್ಯಾದಲ್ಲಿ ಗಮನ ಸೆಳೆದಿದೆ. ಮಹಿಳೆಯರು ಮಾಸ್ಕೋದ ಕ್ಲಿನಿಕ್ ಮೂಲಕ ಅವರ ವೀರ್ಯವನ್ನು ಪಡೆಯಲು ಬಯಸಿದ್ದರು ಎಂದು ವರದಿ ತಿಳಿಸಿದೆ.
ಗರ್ಭಧಾರಣೆಯ ವಿಧಾನವನ್ನು ಲೆಕ್ಕಿಸದೇ ನನ್ನ ಎಲ್ಲಾ ಮಕ್ಕಳು ನನ್ನ ಆಸ್ತಿಯಲ್ಲಿ ಪಾಲುಪಡೆಯಲಿದ್ದಾರೆ. ಇಂದಿನಿಂದ 30 ವರ್ಷಗಳ ನಂತರ, ನಾನು ಹೋದ ನಂತರ ಅವರು ನನ್ನ ಎಸ್ಟೇಟ್‌ನಲ್ಲಿ ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪಾವೆಲ್ ಡುರೊವ್ ಹೇಳಿದ್ದಾಗಿ ವರದಿಯಾಗಿದೆ.


