Tuesday, December 30, 2025
Menu

ಕೋಗಿಲು ಪ್ರಕರಣ: ಅಕ್ರಮ ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲವೆಂದ ಡಿಕೆ ಶಿವಕುಮಾರ್

“ಅಕ್ರಮವಾಗಿ ಒತ್ತುವರಿ ಯಾರೂ ಮಾಡಬಾರದು.  ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ. ಯಾವ ರೀತಿಯಲ್ಲೂ ಓಲೈಕೆ ರಾಜಕಾರಣ ಮಾಡುವಂತಹ ಪ್ರಶ್ನೆ ಬರುವುದಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಮುಸ್ಲಿಂಮರ ಓಲೈಕೆ ಮಾಡಲಾಗುತ್ತಿದೆ ಎನ್ನುವ ಪ್ರತಿಪಕ್ಷದ ಟೀಕೆಗಳ ಬಗ್ಗೆ ಕೇಳಿದಾಗ, “ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರು ಹಣ ಸಂಗ್ರಹಿಸಿದ್ದಾರೆ ಎಂದು ಅಲ್ಲಿನವರೇ ಹೇಳಿಕೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನೀಡಲಾಗು ವುದು” ಎಂದರು.

“ಈ ಹಿಂದೆ ಕೆಲವು ಭಾಗಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಅದನ್ನು ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಹೊರಗಿನಿಂದ ಬಂದವರು ಸಹ ಹೊಸದಾಗಿ ಸೇರಿಕೊಂಡಿದ್ದಾರೆ. ನೈಜ ಮತದಾರರು ಎಷ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು” ಎಂದು ಹೇಳಿದರು.

ಕರ್ನಾಟಕದ ವಿಚಾರದಲ್ಲಿ ಕೇರಳ ರಾಜ್ಯದ ಹಸ್ತಕ್ಷೇಪ ಬೇಡ ಎನ್ನುವ ಹೇಳಿಕೆಯನ್ನು ಕೇರಳದ ಕೆಲವು ಸಂಸದರು ಖಂಡಿಸಿರುವ ಬಗ್ಗೆ ಕೇಳಿದಾಗ, “ನಾವು ಉತ್ತಮವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ನಾವು ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಅವರು ಈ ಹಿಂದೆ ಕೊಟ್ಟ ಭರವಸೆ, ಪ್ರವಾಹದ ಸಂದರ್ಭದಲ್ಲಿ ನೀಡಿದ ಮಾತನ್ನೇ ಈಡೇರಿಸಿಲ್ಲ. ಅಂತಹವರು ನಮಗೆ ಹೇಳುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ” ಎಂದರು.

ಕೋಗಿಲು ವಿಚಾರವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವರು ಪ್ರತಿಕ್ರಿಯೆ ನೀಡಿರುವ ಬಗ್ಗೆ ಕೇಳಿದಾಗ, “ಇದಕ್ಕೆ ದೇಶದ ಹಿರಿಯ ನಾಯಕರು ಉತ್ತರಿಸಲಿದ್ದಾರೆ” ಎಂದು ಉತ್ತರಿಸಿದರು. ಎರಡೆರಡು ರಾಜ್ಯದ ಆಧಾರ್ ಕಾರ್ಡ್ ಗಳು, ಮತದಾರರ ಚೀಟಿಗಳು ಸಂತ್ರಸ್ತರ ಬಳಿ ಇರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಗೊತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ” ಎಂದು ಹೇಳಿದರು.

ಅಕ್ರಮ ನಿವಾಸಿಗಳಿಗೆ ಎಲ್ಲಿಯೂ ಮನೆ ನೀಡಲಾಗುವುದಿಲ್ಲ ಎನ್ನಲಾಗುತ್ತಿತ್ತು, ಈಗ ಸಕ್ರಮ ಮಾಡಲಾಗುತ್ತಿದೆಯಲ್ಲ ಎಂದು ಕೇಳಿದಾಗ, “ಅರ್ಹರಿಗೆ ಮಾತ್ರ ಮನೆ ನೀಡಲಾಗುವುದು. ಸ್ಥಳೀಯ ಮತದಾರರ ಪಟ್ಟಿಯಲ್ಲಿ ಹೆಸರು ಹಾಗೂ ನಿಜವಾದ ಸ್ಥಳೀಯ ವಿಳಾದ ಇದ್ದರೆ ಮಾತ್ರ ಮನೆ ನೀಡಲಾಗುವುದು. ಯಾವುದೇ ಸಕ್ರಮ ಮಾಡುತ್ತಿಲ್ಲ. ಅರ್ಹರನ್ನು ಗುರುತಿಸಲಾಗುವುದು” ಎಂದು ಪ್ರತಿಕ್ರಿಯಿಸಿದರು.

Related Posts

Leave a Reply

Your email address will not be published. Required fields are marked *