ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿದ್ದ ಡ್ರಗ್ಸ್ ಫ್ಯಾಕ್ಟರಿಯನ್ನು ಪತ್ತೆ ಮಾಡಿದ ಬಳಿಕ ಮೂವರು ಇನ್ಸ್ಪೆಕ್ಟರ್ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕೊತ್ತನೂರು, ಆವಲಹಳ್ಳಿ ಮತ್ತು ಬಾಗಲೂರು ಠಾಣೆಯ ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಿ ಕಮಿನಷರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಕೊತ್ತನೂರು ಠಾಣೆ ಇನ್ಸ್ಪೆಕ್ಟರ್ ಚೇತನ್ ಕುಮಾರ್, ಆವಲಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆ ಇನ್ಸ್ಪೆಕ್ಟರ್ ಶಬರೀಶ್ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ವೆಂಕಟೇಶ್ ಅವರನ್ನು ಬಾಗಲೂರು ಠಾಣೆಗೆ ಪ್ರಭಾರ ಇನ್ಸ್ಪೆಕ್ಟರ್, ರಾಮಮೂರ್ತಿ ಅವರನ್ನು ಆವಲಹಳ್ಳಿ ಠಾಣೆಗೆ ಪ್ರಭಾರ ಇನ್ಸ್ಪೆಕ್ಟರ್, ಸಂಪಿಗೆಹಳ್ಳಿ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್ ಅವರನ್ನು ಕೊತ್ತನೂರು ಠಾಣೆಗೆ ಪ್ರಭಾರ ಇನ್ಸ್ಪೆಕ್ಟರ್ ಆಗಿ ನೇಮಿಸಲಾಗಿದೆ.
ಮಹಾರಾಷ್ಟ್ರ ಪೊಲೀಸರ ದಾಳಿ ವೇಳೆ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ ಡ್ರಗ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಬಂಧಿತರು. ಈ ಫ್ಯಾಕ್ಟರಿಗಳಿಂದ ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸರಬರಾಜು ಶಂಕೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ರಾಜಸ್ಥಾನದ ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಪ್ರಮುಖ ರೂವಾರಿಗಳಾಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.


