Tuesday, December 30, 2025
Menu

ಕೋಗಿಲು ಅಕ್ರಮ ಶೆಡ್‌ಗಳ ಧ್ವಂಸ: ವೇಣುಗೋಪಾಲ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ: ಡಿಸಿಎಂ

ಕೆಸಿ ವೇಣುಗೋಪಾಲ್ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ನಮಗೆ ಅನೇಕ ವಿಚಾರಗಳ ಬಗ್ಗೆ ಸಲಹೆ ನೀಡಿದ್ದಾರೆ, ಆದರೆ ಅವರು ಎಂದಿಗೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್  ಸ್ಪಷ್ಟಪಡಿಸಿದ್ದಾರೆ.

ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಡಿಕೆ ಶಿವಕುಮಾರ್  ಮಾತನಾಡಿದರು. ವೇಣುಗೋಪಾಲ್ ಅವರು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಟೀಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, ಅವರು ನಮ್ಮ ನಾಯಕರು, ನಮಗೆ ಸಲಹೆ ನೀಡುವ ಎಲ್ಲಾ ಅಧಿಕಾರ ಅವರಿಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ಸಲಹೆ ನೀಡುತ್ತಾರೆ. ಈ ಹಿಂದೆಯೂ ಅನೇಕ ಸಲಹೆ ನೀಡಿದ್ದಾರೆ, ಈಗಲೂ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ ಎಂದು ತಿಳಿಸಿದರು.

ಸಂತ್ರಸ್ತರ ಪುನರ್ವಸತಿ ಬಗ್ಗೆ ಮಾತನಾಡಿ, “ಅನೇಕರು ತಮಗೆ ಬೇರೆ ಕಡೆ ಮನೆಗಳಿದ್ದರೂ ಕೋಗಿಲು ಸರ್ಕಾರಿ ಜಾಗ ಡಂಪ್‌ ಯಾರ್ಡ್‌ನಲ್ಲಿ  ಗುಡಿಸಲು ಹಾಕಿಕೊಂಡಿದ್ದರು. ಉದ್ಯೋಗ ಅರಸಿ ಬಂದು ಇಲ್ಲಿ ವಾಸವಾಗಿದ್ದಾರೆ. ಯಾರಿಗೆ ನಿಜವಾಗಿಯೂ ವಾಸಕ್ಕೆ ಮನೆ ಇಲ್ಲವೊ ಅವರಿಗೆ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು. ಇದಕ್ಕೆ ಅವರು ಒಂದೂವರೆಯಿಂದ ಎರಡು ಲಕ್ಷ ಹಣ ಪಾವತಿಸಬೇಕು. ಇದಕ್ಕೆ ಸಾಲ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ವಹಿಸಲಾಗಿದೆ. ನಾವು ಮನೆ ನೀಡುವ ಮುನ್ನ, ಅವರು ಯಾರು, ಎಲ್ಲಿಂದ ಬಂದಿದ್ದಾರೆ ಎಂದೆಲ್ಲಾ ಆಧಾರ್ ಹಾಗೂ ಇತರೆ ದಾಖಲೆ ಪರಿಶೀಲಿಸುತ್ತೇವೆ. ಅಲ್ಲಿಯವರೆಗೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ” ಎಂದು  ಹೇಳಿದ್ದಾರೆ.

ಕರ್ನಾಟಕವನ್ನು ಕೇರಳ ಸರ್ಕಾರ ಆಳ್ವಿಕೆ ಮಾಡುತ್ತಿದೆಯೇ ? ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್‌ ನಡೆಸುತ್ತಿದ್ದಾರೆಯೇ ? ಕರ್ನಾಟಕದ ಜಮೀನಿನ ಮೇಲೆ ಕೇರಳ ಸರ್ಕಾರದ ಅಧಿಕಾರವಿದೆಯೇ? ಕೇರಳದ ನಿಯೋಗ ರಾಜ್ಯದ ವಿಷಯದಲ್ಲಿ ವರದಿ ಕೇಳುವಂತಾಗಿದೆ ಎಂದರೆ ಕರ್ನಾಟಕದ ನೆಲ, ಜಲದ ಮೇಲೆ ಕಾಳಜಿ ಇಲ್ಲದಿರುವ ನಾಡದ್ರೋಹಿ @INCKarnataka ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ  ಟೀಕಿಸಿದ್ದರು.

Related Posts

Leave a Reply

Your email address will not be published. Required fields are marked *