ಇಪ್ಪತ್ತು ರೂಪಾಯಿ ಸಿಗರೇಟ್ ಹಣದ ವಿಚಾರವಾಗಿ ದಂಪತಿ ನಡುವೆ ನಡೆದ ಜಗಳ ಕೊಲೆ ಮತ್ತು ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಬಾ ನಗರದಲ್ಲಿ ಈ ದುರಂತ ನಡೆದಿದೆ.
ಆಟೋ ಚಾಲಕ ಕುಲ್ವಂತ್ ಪತ್ನಿಯನ್ನು ಕತ್ತು ಹಿಸುಕಿ ಸಾಯಿಸಿದ ಬಳಿಕ ಭಯಗೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಲ್ವಂತ್ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.
ಕುಲ್ವಂತ್ ತನ್ನ ಪತ್ನಿಯ ಬಳಿ ಸಿಗರೇಟ್‌ಗಾಗಿ ಇಪ್ಪತ್ತು ರೂಪಾಯಿ ಕೇಳಿದ್ದು, ಆಕೆ ನೀಡಲು ನಿರಾಕರಿಸಿದಾಗ ಜಗಳ ಶುರುವಾಗಿದೆ, ಬಳಿಕ ಪತ್ನಿ 20 ರೂಪಾಯಿ ನೀಡಿದ್ದಾಎ. ಹಣ ಪಡೆದ ಕುಲ್ವಂತ್, ಮಗನನ್ನು ಸಿಗರೇಟ್ ತರಲು ಅಂಗಡಿಗೆ ಕಳುಹಿಸಿ ಪತ್ನಿಯ ಕತ್ತು ಹಿಸುಕಿ ಸಾಯಿಸಿದ್ದಾನೆ.
ಪತ್ನಿಯನ್ನು ಕೊಂದ ನಂತರ ಕುಲ್ವಂತ್ ಭಯಗೊಂಡು ಮನೆಯಿಂದ ಪರಾರಿಯಾಗಿದ್ದ. ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಲ್ವಂತ್‌ನನ್ನು ರೈಲು ಹಳಿಗಳ ಬಳಿ ಪತ್ತೆ ಮಾಡಲಾಯಿತು. ಪೊಲೀಸರು ಅಲ್ಲಿಗೆ ತಲುಪಿ ಆತನನ್ನು ವಶಕ್ಕೆ ಪಡೆಯುವ ಮೊದಲೇ ಆತ ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


