ನಾಯಿ ಕಚ್ಚಿದ್ದರಿಂದ ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾಗಿದ್ದ ಮೊಸರನ್ನು ಸೇವಿಸಿರುವ ಇನ್ನೂರಕ್ಕೂ ಹೆಚ್ಚು ಮಂದಿಗೆ ರೇಬೀಸ್ ಭೀತಿಯುಂಟಾಗಿದೆ.
ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ಡಿಸೆಂಬರ್ 23ರಂದು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಪುಣ್ಯತಿಥಿ ನಡೆದಿತ್ತು. ಅಲ್ಲಿ ಊಟಕ್ಕೆ ಬಳಸಿದ್ದ ಮೊಸರನ್ನು ನಾಯಿ ಕಡಿತಕ್ಕೆ ಒಳಗಾಗಿದ್ದ ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು. ಸೆಂಬರ್ 26ರಂದು ಎಮ್ಮೆ ಮೃತಪಟ್ಟಿದ್ದು, ತಮಗೆಲ್ಲ ರೇಬೀಸ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ಗೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆಲ್ಲ ರೇಬೀಸ್ ವಿರೋಧಿ ಲಸಿಕೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಲನ್ನು ಕುದಿಸಿದ ನಂತರ ರೇಬೀಸ್ ಅಪಾಯ ಇರುವುದಿಲ್ಲ. ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಸಲುವಾಗಿ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡುತ್ತಿದ್ದೇವೆ. ಯಾವುದೇ ವದಂತಿಗಳನ್ನು ಹರಡದಂತೆ ಗ್ರಾಮದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಾಯಿ ಕಚ್ಚಿದ್ದರಿಂದ ಎಮ್ಮೆ ಅನಾರೋಗ್ಯಕ್ಕೆ ಒಳಗಾಗಿತ್ತು. ಬಳಿಕ ಅದು ಮೃತಪಟ್ಟಿತ್ತು. ಪುಣ್ಯತಿಥಿ ಸಮಾರಂಭದಲ್ಲಿ ಊಟಕ್ಕೆ ಬಳಸಿದ್ದ ಮೊಸರನ್ನು ಅದೇ ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು. ಇದರಿಂದ ಸೇವಿಸಿದವರಿಗೆಲ್ಲ ಸೋಂಕಿನ ಭೀತಿ ಾವರಿಸಿಕೊಂಡಿದ್ದು, ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದೇವೆ ಎಂದು ಗ್ರಾಮಸ್ಥ ಧರ್ಮಪಾಲ್ ತಿಳಿಸಿದ್ದಾರೆ.


