ಹುಣಸೂರು ನಗರದಲ್ಲಿ ಮಟ ಮಟ ಮಧ್ಯಾಹ್ನವೇ ದರೋಡೆಕೋರರು ಚಿನ್ನ ಮತ್ತು ವಜ್ರದ ಶೋ ರೂಂಗೆ ನುಗ್ಗಿ 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಮೈಸೂರಿನಿಂದ 45 ಕಿ.ಮೀ ದೂರದಲ್ಲಿರುವ ಹುಣಸೂರು ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಚಿನ್ನದ ಅಂಗಡಿಗೆ ಬಂದೂಕುಗಳೊಂದಿಗೆ ನುಗ್ಗಿದ ಮುಖಕ್ಕೆ ಮಾಸ್ಕ್ ಧರಿಸಿದ್ದ ದರೋಡೆಕೋರರ ತಂಡವು 5 ಕೆಜಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದೆ.
ಈ ದರೋಡೆ ಕೃತ್ಯವು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಮಧ್ಯಾಹ್ನ 1.30ಕ್ಕೆ ದರೋಡೆ ನಡೆದಿದ್ದು, ಹತ್ತಕ್ಕೂ ಹೆಚ್ಚು ಸಿಬ್ಬಂದಿ ಶೋ ರೂಂನಲ್ಲಿದ್ದರು. ಅವರಿಗೆ ಬಂದೂಕು ತೋರಿಸಿ ಭಯಪಡಿಸಿದ್ದರು ಎಂದು ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಸಿಬ್ಬಂದಿ ದರೋಡೆಕೋರರನ್ನು ಬೆನ್ನಟ್ಟಿದರೂ ಹಿಡಿಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಶೋರೂಂ ಒಳಗಿನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರೀಕ್ಷಿಸಿ ದರೋಡೆಕೋರರ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಸಿಬ್ಬಂದಿಯಿಂದ ವಿವರ ಪಡೆದರು. ಪ್ರಕರಣವನ್ನು ಭೇದಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಚೆಕ್‌ಪೋಸ್ಟ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ.


