Menu

ಆಂಧ್ರದ ಗಣಿಗಾರಿಕೆ ಪರ್ಮಿಟ್‌, ಕರ್ನಾಟಕ ಭೂ ಒತ್ತುವರಿ: ಜನಾರ್ದನ ರೆಡ್ಡಿ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಂಧ್ರದ ಗಣಿಗಾರಿಕೆ ಪರವಾನಗಿ ಪಡೆದುಕೊಂಡು ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಸರ್ವೆಯಲ್ಲಿ ಈ ವಿಚಾರ ಬಯಲಾಗಿದೆ.

ಹೀಗಾಗಿ ಜನಾದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ ಎದುರಾಗಿದೆ. ಕಳೆದ ತಿಂಗಳು ನಿವೃತ್ತ ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ಭೇಟಿ ನೀಡಿ ಡ್ರೋನ್ ಮೂಲಕ ಸಮೀಕ್ಷೆ ನಡೆಸಿದೆ. ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇ‌ರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನ 25.98 ಹೆಕ್ಟೇ‌ರ್, ಒಎಂಪಿ2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೆ ಮಾಡಿತ್ತು. ಆಗ ಜನಾರ್ದನ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಹಾಗಾಗಿ ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿರುವುದ ಪತ್ತೆಯಾಗಿದೆ ಎಂದು ವರದಿ ಸಲ್ಲಿಸಿದೆ.

ಜನಾರ್ದನ ರೆಡ್ಡಿಯ ಒಎಂಸಿ ಕಂಪನಿ ಕರ್ನಾಟಕ ಮತ್ತು ಆಂಧ್ರದ ನಡುವಿನ ಅಂತಾರಾಜ್ಯ ಗಡಿಯನ್ನು ನಾಶಗೊಳಿಸಿದ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ನ್ಯಾಯಮೂರ್ತಿ ಧುಲಿಯಾ ಸಮಿತಿ ಸರ್ವೆಯಲ್ಲಿ ಅದು ಸ್ಪಷ್ಟವಾಗಿದೆ. ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ನಾನಾ ಕಡೆ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂಬುದು ಸಾಬೀತಾಗಿ ಸಿಬಿಐ ವಿಚಾರಣಾಧೀನ ನ್ಯಾಯಾಲಯ ರೆಡ್ಡಿಗೆ ಶಿಕ್ಷೆ ಪ್ರಕಟಿಸಿತ್ತು.

ಅಮಿಕಸ್ ಕ್ಯೂರಿ ಹಾಗೂ ಆಂಧ್ರ ಪ್ರದೇಶದ ಸಮ್ಮಿರೆಡ್ಡಿ ಸಮಿತಿ ನೀಡಿದ ವರದಿ ಅನ್ವಯ ಸುಪ್ರೀಂಕೋರ್ಟ್ ಈ ಹೊಸ ಸಮಿತಿ ರಚಿಸಿ ನಡೆಸಿದ ಸಮೀಕ್ಷೆಯಲ್ಲಿ ಅತಿಕ್ರಮಣ ನಡೆದಿದೆ ಎಂಬುದು ದೃಢಪಟ್ಟಿದೆ. ನಿವೃತ್ತಿ ನ್ಯಾ. ದುಲಿಯಾ ವರದಿಗೆ ಗಣಿಗುತ್ತಿಗೆ ಮಾಲೀಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 2026 ಜನವರಿ ಐದರಂದು ದೆಹಲಿಯಲ್ಲಿ ಸಭೆ ನಡೆಯಲಿದೆ.

ದಾಖಲೆ ಸಲ್ಲಿಸದಿದ್ದರೆ ದುಲಿಯಾ ಸಮಿತಿ ವರದಿಯನ್ನು ಮೂರು ತಿಂಗಳ ಒಳಗೆ ಅಂತಿಮ ವರದಿ ಆಧಾರವಾಗಿ ಪರಿಗಣಿಸಿ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ. 29 ಲಕ್ಷ ಟನ್ ಅದಿರು ಮಾರಾಟ ಸಂಬಂಧ ಹಣ ವಸೂಲಿ ಆಗ್ರಹ ಕುರಿತು ಗಣಿ ಉದ್ಯಮಿ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈವರೆಗೆ ಕ್ರಮವಾಗಿಲ್ಲ ಎಂದು ಅವರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *