Menu

ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಎಲ್ಲದಕ್ಕೂ ಕೊನೆ ಎಂಬುದು ಇದೆ: ಡಿಕೆ ಶಿವಕುಮಾರ್‌

ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಎಲ್ಲಕ್ಕೂ ಕೊನೇ ಎಂಬುದು ಇದೆ, ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಮುಕ್ಕಾಲು ಪ್ರಪಂಚ ಗೆದ್ದ ಅಲೆಕ್ಸಾಂಡರ್ ಶಾಶ್ವತ ಇರಲಿಲ್ಲ, ಸದ್ದಾಂ ಹುಸೇನ್ ಅವಿತುಕೊಂಡ, ಇನ್ನು ಬೇರೆಯ ವರದು ಯಾವ ಲೆಕ್ಕ?, ಮಹಾತ್ಮ ಗಾಂಧೀಜಿ  ಹೆಸರನ್ನು  ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಅವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ,  ಎಲ್ಲದಕ್ಕೂ ಕೊನೆ ಎಂಬುದು ಇರಲೇ ಬೇಕಲ್ಲವೇ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ  ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ  ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿದರು. ಮನರೇಗಾ ಹೆಸರು ಬದಲಾವಣೆ ವಿರೋಧಿಸಿ 2026 ರ ಜನವರಿ 5 ನೇ ತಾರೀಕಿನಿಂದ ಹೊಸ ಹೋರಾಟ ರೂಪಿಸಲಾಗುವುದು. ಪಂಚಾಯತಿ ಮಟ್ಟದಿಂದ ಈ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.

ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೇ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150- 200 ಇದ್ದು ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ‌ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದರು.

ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ‌ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ.‌‌ ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕರೂಪಿಸಿದ್ದೇನೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ.  ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆ ಮಾಡಿಸಬೇಕು ಎಂದು ಅವರ ಸಮಯ ಕೇಳಿದ್ದೇನೆ. ಇದೇ ಭಾರತ್ ಜೋಡೋ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಹೊರಟಿದ್ದೇವೆ. ಈಗಾಗಲೇ 70 ಕಾಂಗ್ರೆಸ್ ಕಚೇರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲೂ ಎರಡು ಕಚೇರಿಗಳ ನಿರ್ಮಾಣ ಮಾಡಲಾಗುವುದು. ರಾಮಲಿಂಗಾರೆಡ್ಡಿ , ನಾನು ಜವಾಬ್ದಾರಿತೆಗೆದುಕೊಂಡಿದ್ದೇನೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಅಡಿಪಾಯ ಹಾಕಲು ಕಾಯಲು ಹೋಗಬೇಡಿ.  ಮಲ್ಲಿಕಾರ್ಜುನ ಖರ್ಗೆ , ರಾಹುಲ್‌ ಗಾಂಧಿಯವರು ಬೆಂಗಳೂರಿನಲ್ಲಿ ವರ್ಚುಯಲ್ ಆಗಿ ಎಲ್ಲಾ ಕಾಂಗ್ರೆಸ್ ಭವನಗಳ ಅಡಿಪಾಯಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಆಡಳಿತ ರಾಜ್ಯಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಅಸಾಧ್ಯ

ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆ ತಂದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡಲು ಮುಂದಾಗಿದೆ.  ಬರಗಾಲ ಪ್ರದೇಶದಲ್ಲಿ ವರ್ಷಕ್ಕೆ 150 ಮಾನವ ದಿನಗಳ ಉದ್ಯೋಗ ನೀಡಲು ಕಾನೂನಿನಲ್ಲಿ ಸೂಚಿಸಲಾಗಿತ್ತು. ಆದರೆ  ನಮ್ಮ ರಾಜ್ಯಕ್ಕೆ ಬರಗಾಲ ಇದ್ದಾಗಲೂ ನೀಡಲಿಲ್ಲ, ಕೋವಿಡ್ ಸಮಯದಲ್ಲೂ ನೀಡಲಿಲ್ಲ ಎಂದರು.

ಕೇಂದ್ರ ಸರ್ಕಾರದ ತರಲಾಗಿರುವ 60:40 ಅನುಪಾತದ ನೂತನ ತಿದ್ದುಪಡಿ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಈ ಹಿಂದೆ ಮನರೇಗಾ ಯೋಜನೆಯನ್ನು ನನ್ನ  ಕನಕಪುರ ಕ್ಷೇತ್ರದಲ್ಲಿ ಅತಿ ಹೆಚ್ಚು  ಸದ್ಬಳಕೆ ಮಾಡಿಕೊಳ್ಳಲಾಗಿದೆ. ನಾನು  ಹಣ ಲೂಟಿ ಮಾಡಿರಬಹುದು ಎಂದು ಪರಿಶೀಲನೆ ಮಾಡಲು ಕೇಂದ್ರ ಸರ್ಕಾರ  ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿತ್ತು. ನಂತರ ಕೇಂದ್ರ ಸರ್ಕಾರ ನಮ್ಮ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಿದೆ ಎಂದು ಹೇಳಿದರು.

 ಜಿಬಿಎ ಚುನಾವಣೆ ಟಿಕೆಟ್ ಆಕಾಂಕ್ಷಿ ಅರ್ಜಿ ಬಿಡುಗಡೆ

ಮೀಸಲಾತಿ ನಿಗದಿಯಾದ ಮೇಲೆ ಜಿಬಿಎ ಚುನಾವಣೆಗೆ ತಯಾರಿ ನಡೆಸಿದರಾಯಿತು ಎಂದುಕೊಂಡರೆ ನೀವುಗಳು ಗೆಲ್ಲಲು ಸಾಧ್ಯವಿಲ್ಲ. ‌ಏಕೆಂದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ಸಹ ಎಲ್ಲಾ ನಿಗದಿಯಾದಾಗ ಮಾಡುತ್ತೇನೆ ಎಂದರೆ ಈ ಡಿಕೆಶಿವಕುಮಾರ್ ನಿಮ್ಮನ್ನು ಗುರುತಿಸುವುದಿಲ್ಲ. ಇಂದಿನಿಂದ ಆಕಾಂಕ್ಷಿ‌ ಅಭ್ಯರ್ಥಿಗಳ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಸಾಮಾನ್ಯ ಅಭ್ಯರ್ಥಿಗಳ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ ರೂ. ಕಟ್ಟಡ ನಿಧಿಗೆ ಹೋಗಲಿದೆ. ಏಕೆಂದರೆ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 20 ಕೋಟಿ, ರಾಜ್ಯ ಕಚೇರಿ ನಿರ್ಮಾಣಕ್ಕೆ 60 ಕೋಟಿ ‌ಖರ್ಚಾಗಲಿದೆ.‌ ತಾಲೂಕು ಕಚೇರಿಗಳ ನಿರ್ಮಾಣಕ್ಕೂ ಕೆಪಿಸಿಸಿಯಿಂದ ಹಣ ನೀಡಬೇಕಿದೆ. ಎಂಎಲ್ ಎ ಚುನಾವಣೆ ವೇಳೆ 2 ಲಕ್ಷ ಹಣ ನಿಗದಿ ಮಾಡಲಾಗಿತ್ತು. ಇದರಿಂದ 20 ಕೋಟಿ ಹಣ ಸಂಗ್ರಹವಾಯಿತು.‌ ಇದರಿಂದ ಪಕ್ಷದ ಪರವಾಗಿ ಜಾಹಿರಾತು ನೀಡಲು ಸಾಧ್ಯವಾಯಿತು. ಮಹಿಳೆಯರಿಗೆ ರಿಯಾಯಿತಿ ಇಲ್ಲ.‌ ಒಂದು ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ತಿಳಿದಿದೆ ಎಂದರು.

ಮಹಿಳೆಯರಿಗೆ ಹಾಗೂ ಒಬಿಸಿಗಳಿಗೆ ರಿಯಾಯಿತಿ ನೀಡಿ ಎಂದು ಸಭಿಕರು ಕೂಗಿದ ವೇಳೆಯಲ್ಲಿ, “ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ, ಉಚಿತ ‌ಬಸ್ ನೀಡಲಾಗುತ್ತಿದೆ. ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಹ ಒಕ್ಕಲಿಗರು ಒಬಿಸಿ,ಲಿಂಗಾಯತರು ಒಬಿಸಿ, ಆದಾಯ ಇಲ್ಲದ ಬ್ರಾಹ್ಮಣರು ಒಬಿಸಿ ಎಂದರು.

ಸಿಎಂ ಹಾಗೂ ಜಾರ್ಜ್ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25 ಸಾವಿರ ನಿಗದಿ ಮಾಡಲಾಗುತ್ತಿದೆ. ನಿಮ್ಮ ದುಡ್ಡು ನನಗೆ ಬೇಡ, ಜನವರಿ 15 ನೇ ತಾರೀಕಿನ ಒಳಗೆ ಅರ್ಜಿ ಹಾಕಬೇಕು. 369 ವಾರ್ಡ್ ಗಳಿಂದ ಶೇ.50  ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದ 10 ಮಂದಿ‌‌ ಮಹಿಳೆಯರಾದರೂ ಅರ್ಜಿ ಸಲ್ಲಿಕೆ ಮಾಡಬೇಕು. ಯಾರೇ ಆದರೂ ಚೆನ್ನಾಗಿ ಕೆಲಸ ಮಾಡಿರಬೇಕು. ಅಂತಹವರಿಗೆ ಪ್ರಾಮುಖ್ಯತೆ ನೀಡಲಾಗುವುದು. ಯಾರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಾರೋ ಅವರಿಗೆ ಅವಕಾಶ. ಸಿದ್ದರಾಮಯ್ಯ, ಶಿವಕುಮಾರ್ ಹಿಂದೆ ತಿರುಗಿದರೆ ಅವಕಾಶವಿಲ್ಲ‌. ಕೆಲಸ ಮಾಡಿದವರಿಗೆ ಹೆಚ್ಚು ಆದ್ಯತೆ ಎಂದು ವಿವರಿಸಿದರು.

ವಿದ್ಯಾರ್ಥಿ ಚುನಾವಣೆ ನಡೆಸುವ ಬಗ್ಗೆ ಸಮಿತಿ ರಚನೆ

“ವಿದ್ಯಾರ್ಥಿ ಚುನಾವಣೆ ಹೇಗೆ ನಡೆಸಬೇಕು ಎಂದು ತೀರ್ಮಾನಿಸಲು ಹೊಸ ಸಮಿತಿ ರಚನೆ ಮಾಡಲಾಗಿದೆ. ಇದರಿಂದ ಹೊಸ ನಾಯಕರನ್ನು ಬೆಳಕಿಗೆ ತರಲಾಗುವುದು. ಶರಣ ಪ್ರಕಾಶ್ ಪಾಟೀಲ್, ಡಾ.ಸುಧಾಕರ್, ಸಲೀಂ ಅಹಮದ್, ಪುಟ್ಟಣ್ಣ, ಎನ್ ಎಸ್ ಯುಐ ಮಾಜಿ ಅಧ್ಯಕ್ಷರು, ಯುವ ಕಾಂಗ್ರೆಸ್ ಅಧ್ಯಕ್ಷರು ಹೀಗೆ ಒಂಬತ್ತು ಜನರ ಸಮಿತಿ ರಚನೆ ಮಾಡಲಾಗಿದೆ. ಇವರು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ. ನಾವು ವಿದ್ಯಾರ್ಥಿ ಚುನಾವಣೆಗಳ ಮೂಲಕವೇ ರಾಜಕೀಯಕ್ಕೆ ಬಂದವರು. ಆನಂತರ ಗಲಾಟೆಗಳು ಹೆಚ್ಚಾದ ಕಾರಣಕ್ಕೆ ರಂಗನಾಥ್  ಇದನ್ನು ನಿಲ್ಲಿಸಿಬಿಟ್ಟರು. ಈಗ ಇದರ ಅವಶ್ಯಕತೆ ಹೆಚ್ಚು ಕಾಣುತ್ತಿದೆ ಎಂದರು.

“140 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಸ್ಥಾಪನೆಯಾಯಿತು. ಇಂದು ಸೇವಾದಳದ ಸಂಸ್ಥಾಪನಾ ದಿನವೂ ಆಗಿದೆ. ಸೇವಾದಳ ಸೇವೆಯ ಉದ್ದೇಶವಾಗಿದೆ. ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಸೇವಾದಳದ ಅಧ್ಯಕ್ಷರಾಗಿ ಇದನ್ನು ವಿಭಾಗವಾನ್ನಾಗಿ ಪರಿಗಣಿಸಿದರು ಎಂದರು.

ಈ ಸರ್ಕಾರದಲ್ಲಿ ಐದು ಗ್ಯಾರಂಟಿ ನೀಡಿದ್ದೇವೆ. ನಮ್ಮ ಈ ಗ್ಯಾರಂಟಿ ಯೋಜನೆಗಳನ್ನು ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಯಾವುದೇ ಸರ್ಕಾರ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಶಿವಕುಮಾರ್‌ ಹೇಳಿದರು. ಪ್ರಧಾನಮಂತ್ರಿಗಳು ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದರು. ನಂತರ ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬಿಹಾರ ರಾಜ್ಯದ ಚುನಾವಣೆವರೆಗೂ ಇದೇ ಯೋಜನೆಗಳನ್ನು ನಕಲು ಮಾಡಿದರು. ಬಿಹಾರದಲ್ಲಿ ಚುನಾವಣೆಗೆ ಒಂದು ತಿಂಗಳು ಮುಂಚಿತವಾಗಿ ಮಹಿಳೆಯರ ಖಾತೆಗೆ 10 ಸಾವಿರ ಹಾಕಿದರು.  ಐದು ಗ್ಯಾರಂಟಿ ಯೋಜನೆ ಮೂಲಕ ಬಡವರಿಗೆ ಪ್ರತಿ ತಿಂಗಳು  5 ಸಾವಿರ ಆರ್ಥಿಕ ನೆರವು ನೀಡಲು ಮುಂದಾದೆವು. ನಮ್ಮ ಈ ಐತಿಹಾಸಿಕ ತೀರ್ಮಾನ ದೇಶಕ್ಕೆ ಮಾದರಿಯಾಗಿದೆ ಎಂದರು.

Related Posts

Leave a Reply

Your email address will not be published. Required fields are marked *