ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಕಿಡಿಗೇಡಿಗಳು ಸಾಂತಾ ಕ್ಲಾಸ್ ಟೋಪಿ ಹಾಕಿ ಮೂಲಕ ಅಪಮಾನ ಮಾಡಿದ್ದು, ಕೃತ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಿಂಡಲಗಾ ರಸ್ತೆಯ ಕ್ಯಾಂಪ್ ಪ್ರದೇಶದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಕೆಲವು ಕಿಡಿಗೇಡಿಗಳು ತಲೆ ಹಾಗೂ ಕೈ ಮೇಲೆ ಸಾಂತಾ ಕ್ಲಾಸ್ನ ಕೆಂಪು ಟೋಪಿಯನ್ನು ಹಾಕಿದ್ದಾರೆ. ರಾಷ್ಟ್ರಪಿತನಿಗೆ ಹೀಗೆ ಅವಮಾನ ಮಾಡಿರುವುದು ಸ್ಥಳೀಯರಿಗೆ ಮತ್ತು ಮತ್ತು ಗಾಂಧಿವಾದಿಗಳಿಗೆ ಬೇಸರ ತರಿಸಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕ್ಯಾಂಪ್ ಠಾಣೆಯ ಪೊಲೀಸರು ಪ್ರತಿಮೆಯ ಮೇಲಿದ್ದ ಟೋಪಿಯನ್ನು ತೆರವುಗೊಳಿಸಿದ್ದಾರೆ. ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಅಪಮಾನ ಮಾಡಿದ ಕಿಡಗೇಡಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಪ್ರತಿಮೆಗೆ ಟೋಪಿ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಇಂತಹ ಕೃತ್ಯಗಳನ್ನು ಎಸಗಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


