Menu

ಡಿ.ಬಿ. ಬಸವರಾಜು ಅವರಿಗೆ ಬೆಂಗಳೂರು ಪ್ರೆಸ್‌ಕ್ಲಬ್‌ನ ಪ್ರತಿಷ್ಠಿತ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿಯ ಗರಿ

ಮಾಧ್ಯಮ ರಂಗದ ಸಾಧನೆಗೆ ಬೆಂಗಳೂರು ಪ್ರೆಸ್‌ಕ್ಲಬ್‌ ನೀಡುವ  2025ನೇ ಸಾಲಿನ ಪ್ರತಿಷ್ಠಿತ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿಗೆ  ನಾಡಿನ ಪ್ರಭಾವಿ ದಿನಪತ್ರಿಕೆಗಳಲ್ಲಿ ಒಂದಾದ ‘‘ಉದಯ ಕಾಲ’ ಪತ್ರಿಕೆಯ ಸಿಇಒ ಡಿ.ಬಿ. ಬಸವರಾಜು  ಭಾಜನರಾಗಿದ್ದಾರೆ. ಡಿಸೆಂಬರ್ 30ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಾಧ್ಯಮ ಮತ್ತು ಆಡಳಿತಾತ್ಮಕ ಕ್ಷೇತ್ರದಲ್ಲಿ ಡಿ.ಬಿ. ಬಸವರಾಜು ಅವರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಪ್ರೆಸ್‌ಕ್ಲಬ್ ಈ ಗೌರವಕ್ಕೆ ಅವರನ್ನು ಆಯ್ಕೆ ಮಾಡಿದೆ. 56 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬೆಂಗಳೂರು ಪ್ರೆಸ್‌ಕ್ಲಬ್, ದೇಶದ ಅತ್ಯಂತ ಗೌರವಾನ್ವಿತ ಪತ್ರಕರ್ತರ ಒಕ್ಕೂಟವಾಗಿದ್ದು, ಪ್ರತಿವರ್ಷ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ಯನ್ನು ನೀಡುತ್ತಾ ಬಂದಿದೆ ಎಂಬುದು ಗಮನಾರ್ಹ.

ಗಣ್ಯರ ಸಾಲಿಗೆ ಬಸವರಾಜು ಸೇರ್ಪಡೆ
ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಭಾರತ ರತ್ನ ಸಿ.ಎನ್.ಆರ್. ರಾವ್, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಇನ್ಫೋಸಿಸ್ ಸುಧಾಮೂರ್ತಿ, ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‌ಜೀ ಸೇರಿದಂತೆ ನಾಡಿನ ಶ್ರೇಷ್ಠ ಸಾಧಕರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೀಗ ಉದಯಕಾಲದ ಡಿ.ಬಿ. ಬಸವರಾಜು  ಈ ಗಣ್ಯರ ಪಟ್ಟಿಗೆ ಸೇರ್ಪಡೆಯಾ ಗಿರುವುದು ಮಾಧ್ಯಮ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಡಿಸೆಂಬರ್ 30ರಂದು ಪ್ರಶಸತಿ ಪ್ರದಾನ ಸಂಭ್ರಮ
ಡಿಸೆಂಬರ್ 30 ಮಂಗಳವಾರ ಸಂಜೆ 5:00 ಗಂಟೆಗೆ ಬೆಂಗಳೂರಿನ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯಲಿರುವ  ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಲವಾರು ಸಚಿವರು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ.

ಪ್ರೆಸ್‌ಕ್ಲಬ್ ಅಧ್ಯಕ್ಷರಾದ ಆರ್. ಶ್ರೀಧರ್ ಮತ್ತು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಅವರು ಬಸವರಾಜು ಅವರ ಸಾಧನೆಯನ್ನು ಶ್ಲಾಘಿಸಿ ಅಧಿಕೃತವಾಗಿ ಅಭಿನಂದನೆಗಳನ್ನು ಸಲ್ಲಿಸುವ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಬಸವರಾಜು ಅವರ ಸಾಧನೆಯ ಹಾದಿ

ಡಿ.ಬಿ. ಬಸವರಾಜು ಅವರು  ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ದಾಳಿಂಬ ಗ್ರಾಮದವರು. ಬಸವೇಗೌಡ ಮತ್ತು ಗೌರಮ್ಮ ಅವರ ಪುತ್ರರಾದ ಡಿ.ಬಿ. ಬಸವರಾಜು ಅವರು ಬಿಎಸ್ಸಿ ಪದವೀ‘ರರು. ಓದಿನಾಚೆಗೆ ವೃತ್ತಿಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ, ಪ್ರಯೋಗಶೀಲರಾಗಿ ತೊಡಗಿಸಿಕೊಂಡವರು.

ರಾಜ್ಯದ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ, ಕನ್ನಡಪ್ರ‘, ವಿಶ್ವವಾಣಿ ಪತ್ರಿಕೆಯಲ್ಲಿ ಸುದೀರ್ಘವಾಗಿ ಕಾರ್ಯನಿರ್ವಹಿಸಿದ ಅನುಭವಿಗಳು. 1999-2005ರ ಅವಧಿಯಲ್ಲಿ ವಿಆರ್‌ಎಲ್ ಸಂಸ್ಥೆಯ ವಿಜಯಕರ್ನಾಟಕ ದಿನಪತ್ರಿಕೆಯಯಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಐದು ವರ್ಷಷ,  2011-2015ರಲ್ಲಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಧಾನ ವ್ಯವ ಸ್ಥಾಪಕ ಮತ್ತು ಪತ್ರಿಕೆಯ ಪ್ರಕಾಶಕರಾಗಿ, 2016-18ರಲ್ಲಿ ಎರಡು ವರ್ಷ ವಿಶ್ವವಾಣಿ ಪತ್ರಿಕೆಯಲ್ಲಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ 2018ರಲ್ಲಿ ಅನಿಕೇತನ ಪಬ್ಲಿ ಕೇಷನ್ ಅಂಡ್ ಪ್ರಿಂಟರ್ಸ್‌ ಸಂಸ್ಥೆ ಸ್ಥಾಪಿಸಿದರು. ಬಂಡವಾಳ ಹೂಡಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಾಗಿ ಅತ್ಯಲ್ಪ ಅವಧಿಯಲ್ಲಿ ಉದಯಕಾಲ ಪತ್ರಿಕೆಯನ್ನು ರಾಜ್ಯ ಮಟ್ಟದ ಪತ್ರಿಕೆ ಯನ್ನಾಗಿ ರೂಪಿಸಿದ ಹೆಗ್ಗಳಿಕೆ ಅವರದ್ದು.

ಮಾಧ್ಯಮ  ಕ್ಷೇತ್ರದಲ್ಲಿ 26 ವರ್ಷಗಳ ಸುದೀರ್ಘ ಹಾಗೂ ಅನನ್ಯ ಸೇವೆ ಸಲ್ಲಿಸಿ ಅತಿ ಕಿರಿಯ ವಯಸ್ಸಿನಲ್ಲಿ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿ ಉದಯಕಾಲ ಪತ್ರಿಕೆಯನ್ನು ಬೆಂಗಳೂರು, ಮಂಡ್ಯ, ಬೆಳಗಾವಿ, ಹುಬ್ಬಳ್ಳಿ, ಶಿವ ಮೊಗ್ಗ ಮತ್ತು ಕಲಬುರಗಿ ಒಟ್ಟು ಆರು ಆವೃತ್ತಿಗಳಲ್ಲಿ ಏಕಕಾಲದಲ್ಲಿ ಮುದ್ರಣ ಮಾಡಿ ರಾಜ್ಯದ ಮೂಲೆಮೂಲೆಗೆ ತಲು ಪಿಸಿ ರಾಜ್ಯದಲ್ಲಿಯೇ ಉದಯಕಾಲ ಪತ್ರಿಕೆಗೆ ಅರನೇ ಸ್ಥಾನ ದೊರಕಿಸಿಕೊಟ್ಟ ಹೆಚ್ಚುಗಾರಿಕೆ ಅವರದು.

ಕೆಲವೇ ವರ್ಷಗಳಲ್ಲಿ ನೂರಾರು ಜನರಿಗೆ ನೇರ ಉದ್ಯೋಗ, ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ ಯಶಸ್ವಿ ಪತ್ರಿಕೋದ್ಯಮಿ ಆಗಿ ಛಾಪು ಮೂಡಿಸಿದ ಡಿ.ಬಿ.ಬಸವರಾಜು ಅವರು ಇದೀಗ ತಮ್ಮ ಅನನ್ಯ ಕಾರ್ಯಗಳಿಂದ ಕರ್ನಾಟಕದ ಹೆಮ್ಮೆಯ ವ್ಯಕ್ತಿಯಾಗಿ ರೂಪಗೊಂಡಿರುವುದು ಸಾಧನೆಯ ಹೆಗ್ಗುರುತು.

Related Posts

Leave a Reply

Your email address will not be published. Required fields are marked *