ಡ್ರಾಪ್ ನೆಪದಲ್ಲಿ ಕರೆದು ಚಲಿಸುತ್ತಿದ್ದ ಕಾರಿನಲ್ಲೇ ಕಂಪನಿ ಸಿಇಒ ಸೇರಿದಂತೆ ಮೂವರು ಮಹಿಳಾ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಪ್ರಕರಣ ರಾಜಸ್ಥಾನದ ಉದಯ್‌ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜಿಕೆಎಂ ಕಂಪನಿಯೂ ಮಹಿಳಾ ಸ್ನೇಹಿ ಮಾನದಂಡದ ವಿಚಾರದಲ್ಲಿ 5ರಲ್ಲಿ 4.7 ರೇಟಿಂಗ್ ಹೊಂದಿದೆ. ಅಂದರೆ ಕಂಪನಿಯಲ್ಲಿ ಮಹಿಳೆಯರಿಗೆ ಇರುವ ಸವಲತ್ತು ವಾತಾವರಣ, ಅವರನ್ನು ನಡೆಸಿ ಕೊಳ್ಳುವ ರೀತಿ ಉತ್ತಮವೆಂದು ಅರ್ಥ. ಉತ್ತಮ ಮಹಿಳಾ ರೇಟಿಂಗ್ ಹೊಂದಿರುವ ಜಿಕೆಎಂ ಐಟಿ ಕಂಪನಿಯ ಸಿಇಒ ಮಹಿಳಾ ಮ್ಯಾನೇಜರ್ ಮೇಲೆ ಕಂಪನಿಯ ಮತ್ತಿಬ್ಬರು ಉದ್ಯೋಗಿಗಳ ಜೊತೆ ಸೇರಿ ಗ್ಯಾಂಗ್‌ರೇಪ್ ಮಾಡಿರುವುದು ಆಘಾತಕಾರಿ ಘಟನೆ.
ಡಿಸೆಂಬರ್ ಆರಂಭದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಕೆಎಂ ಕಂಪನಿಯ ಸಿಇಒ ಜಿತೇಶ್ ಸಿಸೋದಿಯಾ, ಎಕ್ಸಿಕ್ಯೂಟಿವ್ ಹೆಡ್ ಶಿಲ್ಪಾ ಸಿರೋಹಿ ಹಾಗೂ ಆಕೆಯ ಗಂಡ ಗೌರವ್ ಗ್ಯಾಂಗ್‌ರೇಪ್ ಮಾಡಿದ್ದಾರೆ ಎಂದು ಸಂತ್ರಸ್ತೆ ಮ್ಯಾನೇಜರ್ ಆರೋಪಿಸಿದ್ದಾರೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿಸೆಂಬರ್ 20ರಂದು ಕಂಪನಿ ಸಿಇಒ ಜಿತೇಶ್ ಸಿಸೋದಿಯಾ ಹೊಟೇಲೊಂದರಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದರು. ಸಂತ್ರಸ್ತೆಯೂ ಭಾಗವಹಿಸಿದ್ದರು. ಮದ್ಯಸೇವಿಸಿದ ನಂತರ ಅವರಿಗೆ ಮಲೇರಿದೆ, ಈ ವೇಳೆ ಕೆಲವರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಮಹಿಳಾ ಎಕ್ಸಿಕ್ಯೂಟಿವ್ ಶಿಲ್ಪಾ ಸಿರೋಹಿ ತಾವೇ ಆಕೆ ಯನ್ನು ಪಾರ್ಟಿ ನಂತರ ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಪಾರ್ಟಿ ಮುಗಿದ ನಂತರ ಆಕೆಯನ್ನು ಕಂಪನಿಯ ಸಿಇಒ, ಎಕ್ಸಿಕ್ಯೂಟಿವ್ ಹೆಡ್ ಶಿಲ್ಪಾ ಸಿರೋಹಿ. ಆಕೆಯ ಗಂಡ ಗೌರವ್ ಮೂವರು ಸೇರಿ ಕಾರಿನಲ್ಲಿ ಮನೆಗೆ ಬಿಡುವುದಕ್ಕೆ ಕರೆದೊಯ್ದಿದ್ದಾರೆ.
ದಾರಿಮಧ್ಯೆ ಆರೋಪಿಗಳು ಅಮಲು ಪದಾರ್ಥವನ್ನು ದಾರಿ ಮಧ್ಯೆ ಖರೀದಿಸಿ ಆಕೆಗೆ ನೀಡಿದ್ದಾರೆ. ಅದನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಆಕೆಗೆ ಎಚ್ಚರವಾದಾಗ ಸಿಇಒ ಜಿತೇಶ್ ಸಿಸೋದಿಯಾ ಅತ್ಯಾಚಾರವೆಸಗುತ್ತಿರುವುದು ಗಮನಕ್ಕೆ ಬಂದಿದೆ. ನಂತರ ಮೂವರು ಕೂಡ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಿದ್ದಾರೆ. ಮನೆಗೆ ಬಿಡುವಂತೆ ಕೇಳಿ ಕೊಂಡರೂ ಮುಂಜಾನೆ 5 ಗಂಟೆಯ ನಂತರ ಮನೆಗೆ ಬಿಟ್ಟಿದ್ದಾರೆ. ಪ್ರಜ್ಞೆ ಬಂದಾಗ ಕಿವಿಯೋಲೆ, ಸಾಕ್ಸ್, ಒಳುಡುಪುಗಳು ನಾಪತ್ತೆಯಾಗಿದ್ದವು, ಖಾಸಗಿ ಅಂಗದಲ್ಲಿ ಗಾಯಗಳಾಗಿದ್ದವು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಘಟನೆಯ ವೀಡಿಯೊ ರೆಕಾರ್ಡ್ ಆಗಿದೆ ಎಂದು ಪೊಲೀಸರು ಹೇಳಿದ್ದು, ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಉದಯ್‌ಪುರ ಪೊಲೀಸ್ ಸೂಪರಿಟೆಂಡೆಂಟ್ ಯೋಗೇಶ್ ಗೋಯಲ್ ಮಾಹಿತಿ ನೀಡಿದ್ದಾರೆ.


