ಹಾವೇರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಗೆ ಸಿಸೇರಿಯನ್ ಮಾಡುವಾಗ ಮಗುವಿನ ತಲೆಗೆ ಬ್ಲೇಡ್ ತಾಗಿ ರಕ್ತಸ್ರಾವವಾಗಿದೆ.
ರಾಣೇಬೆನ್ನೂರಿನ ಮಹಮ್ಮದ್ ಮುಜಾಹೀದ್ ಪತ್ನಿ ಬೀಬಿಅಪ್ಸ್ ಮೊದಲ ಹೆರಿಗೆಗಾಗಿ ಹಾವೇರಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರು ಸಿಸೇರಿಯನ್ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದು, ಕುಟುಂಬದವರು ಸಮ್ಮತಿಸಿದ್ದರು.
ಆಪರೇಷನ್ ಥಿಯೇಟರ್‌ಗೆ ಕರೆದೊಯ್ದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವಾಗ ನಿರ್ಲಕ್ಷ್ಯ ತೋರಿದ್ದಾರೆ, ಸಿಸೇರಿಯನ್ ಮಾಡುವಾಗ ಬಳಸುವ ಸರ್ಜಿಕಲ್ ಬ್ಲೇಡ್ ಮಗುವಿನ ತಲೆಗೆ ತಾಗಿದೆ. ಜನಿಸಿದ ಮಗುವಿನ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈದ್ಯರ ಎಡವಟ್ಟಿನಿಂದ ಗಾಯಗೊಂಡ ಮಗುವಿನ ಆರೋಗ್ಯ ಹದಗೆಟ್ಟಿದ್ದು, ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ವೈದ್ಯರ ಬೇಜವಾಬ್ದಾರಿ ಖಂಡಿಸಿ ಕುಟುಂಬಸ್ಥರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಮಗು ಹುಟ್ಟಿದ ಖುಷಿಯಲ್ಲಿರಬೇಕಾದ ಸಮಯದಲ್ಲಿ ಮಗುವಿನ ಪ್ರಾಣ ಉಳಿಸಿಕೊಳ್ಳಲು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ನೋವು ತೋಡಿಕೊಂಡಿದ್ದಾರೆ.


