ಉದ್ಯಮಕ್ಕಾಗಿ ಕೆಐಎಡಿಬಿಯಿಂದ ಭೂಮಿ ಪಡೆದು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಭೂಮಿ ಮಾರಿದ ಆರೋಪ ಹೊಂದಿರುವ ಇನ್ಫೋಸಿಸ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆನೇಕಲ್ ಕೆಐಎಡಿಬಿಯಿಂದ ಹಲವು ವರ್ಷಗಳ ಹಿಂದೆ ಇನ್ಫೋಸಿಸ್‌ಗೆ 53.5 ಎಕರೆ ಭೂಮಿ ಮಂಜೂರು ಮಾಡಿದ್ದು, ಅದನ್ನು ಇನ್ಫೋಸಿಸ್ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಕ್ಕೆ 250 ಕೋಟಿ ರೂಪಾಯಿಗೆ ಮಾರಿದ ಆರೋಪ ಕೇಳಿ ಬಂದಿದೆ.
ಅತ್ತಿಬೆಲೆ ಹೋಬಳಿಯಲ್ಲಿರುವ ಈ ಭೂಮಿಯ ಒಟ್ಟು ಅಭಿವೃದ್ಧಿ ಮೌಲ್ಯ (ಜಿಡಿವಿ) 4,800 ಕೋಟಿ ರೂ.ಗಳಿಗಿಂತ ಹೆಚ್ಚಿದೆ ಎಂದು ಹೇಳಲಾಗಿದೆ. ವಿಷಯ ತಿಳಿದ ನೆಟ್ಟಿಗರು ಎಕ್ಸ್‌ನಲ್ಲಿ ಇನ್ಫೋಸಿಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಸಮಸ್ಯೆ ಕುರಿತಂತೆ ಸರ್ಕಾರವನ್ನು ಟೀಕಿಸುವ ಉದ್ಯಮಿ ಮೋಹನ್‌ದಾಸ್ ಪೈ ಸೇರಿದಂತೆ ಕೆಲವರು ಈ ಬಗ್ಗೆ ಪ್ರತಿಕಿಯಿಸಲಿ ಎಂಬ ಆಗ್ರಹವೂ ಕೇಳಿ ಬಂದಿದೆ. ಈ ವರೆಗೆ ಇನ್ಫೋಸಿಸ್ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮತ್ತಿತರರು ಪ್ರತಿಕ್ರಿಯೆ ನೀಡದ ಕುರಿತಂತೆಯೂ ಟೀಕೆ ವ್ಯಕ್ತಪಡಿಸಲಾಗುತ್ತಿದೆ.ಪುರವಂಕರ ಕಂಪನಿ ಭೂಸ್ವಾಧೀನವು ಬೆಂಗಳೂರಿನಾದ್ಯಂತ ಸೂಕ್ಷ್ಮ ಮಾರುಕಟ್ಟೆಗಳನ್ನು ವಿಸ್ತರಿಸುವ ಕಂಪನಿಯ ಕಾರ್ಯತಂತ್ರದೊಂದಿಗೆ ಹೊಂದಿಕೆಯಾಗಿದ್ದು, ಇದು ಸುಧಾರಿತ ಮೂಲಸೌಕರ್ಯ, ಬಲವಾದ ಸಂಪರ್ಕ ಮತ್ತು ನಿರಂತರ ಬಳಕೆದಾರರ ಬೇಡಿಕೆಯಿಂದ ಬೆಂಬಲಿತವಾಗಿದೆ. ಈ ವಹಿವಾಟಿನ ಕುರಿತಂತೆ ಮಾಹಿತಿಗಾಗಿ ಇನ್ಫೋಸಿಸ್ ಅನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


