ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರ ಆರೋಗ್ಯ ಗಂಭೀರಾವಸ್ಥೆಗೆ ತಲುಪಿರುವ ವಿಚಾರ ಬೆಳಕಿಗೆ ಬಂದಿದೆ.
ರೋಗಿಯ ಆರೋಗ್ಯ ತೀವ್ರವಾಗಿ ಬಿಗಡಾಯಿಸಿದ ಬಳಿಕ ಐಸಿಯುಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನೀತ್ ಸೂರ್ಯ ಎಂಬ ರೋಗಿ ರಕ್ತಹೀನತೆ ಚಿಕಿತ್ಸೆ ಪಡೆಯಲು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದು, ಅವರ ರಕ್ತದ ಗುಂಪು O+, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಪ್ಪಾಗಿ ಎ ಪಾಸಿಟಿವ್ (A+) ರಕ್ತ ನೀಡಿದ್ದರಿಂದ ಪನೀತ್ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.
ಈ ಎಡವಟ್ಟು ಮಾಡಿದ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
O+ ರಕ್ತದ ಗುಂಪಿನವರಿಗೆ A ರಕ್ತಕಣಗಳ ವಿರುದ್ಧ ಪ್ರತಿಕಾಯಗಳು ಇರುತ್ತವೆ. ಆದ್ದರಿಂದ A+ ರಕ್ತ ನೀಡಿದಾಗ ದೇಹದ ರೋಗನಿರೋಧಕ ವ್ಯವಸ್ಥೆಯು ರೋಗಿಗೆ ನೀಡಿದ ರಕ್ತವನ್ನು ಪರಕೀಯವೆಂದು ಗುರುತಿಸಿ ತಕ್ಷಣ ದಾಳಿ ಮಾಡುತ್ತದೆ. ಆಗ ರೋಗಿಯ ದೇಹದಲ್ಲಿ ಅಪಾಯಕಾರಿ ಪ್ರತಿಕ್ರಿಯೆ ಉಂಟಾಗಿ ಜ್ವರ, ಉಸಿರಾಟದ ತೊಂದರೆ, ಎದೆನೋವು, ರಕ್ತದೊತ್ತಡ ಕುಸಿತ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲವು ಸಂದರ್ಭಗಳಲ್ಲಿ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.
ಆಸ್ಪತ್ರೆ ಸಿಬ್ಬಂದಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ಭರವಸೆ ಹೇಳಿದೆ.


