Saturday, December 27, 2025
Menu

15 ವರ್ಷ ನಂತರ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಗೆದ್ದು ಇಂಗ್ಲೆಂಡ್ ಇತಿಹಾಸ!

england cricket team

ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡವನ್ನು ಅದರದ್ದೇ ನೆಲದಲ್ಲಿ 4 ವಿಕೆಟ್ ಗಳಿಂದ ಮಣಿಸುವ ಮೂಲಕ ಇಂಗ್ಲೆಂಡ್ ಕಾಂಗರೂ ನೆಲದಲ್ಲಿ 15 ವರ್ಷಗಳ ನಂತರ ಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದೆ.

ಮೆಲ್ಬೋರ್ನ್ ನಲ್ಲಿ ನಡೆದ ಆಷಸ್ ಸರಣಿಯ 4ನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 132 ರನ್ ಗೆ ಆಲೌಟ್ ಮಾಡಿದ ಇಂಗ್ಲೆಂಡ್ ತಂಡ 175 ರನ್ ಗುರಿಯನ್ನು 6 ವಿಕೆಟ್ ಕಳೆದುಕೊಂಡು ತಲುಪಿತು.

ಕಳೆದ 15 ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ 18 ಟೆಸ್ಟ್ ಪಂದ್ಯಗಳ ಪೈಕಿ ಇಂಗ್ಲೆಂಡ್ 16ರಲ್ಲಿ ಸೋಲು ಹಾಗೂ 2ರಲ್ಲಿ ಡ್ರಾ ಸಾಧಿಸಿತ್ತು. ಇಂಗ್ಲೆಂಡ್ 2010ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಗೆದ್ದಿತ್ತು.  ಪಂದ್ಯ 2 ದಿನದಲ್ಲೇ ಮುಕ್ತಾಯಗೊಂಡಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಆಸ್ಟ್ರೇಲಿಯಾ ತಂಡ ಮೊದಲ ದಿನವೇ ಮೊದಲ ಇನಿಂಗ್ಸ್ ನಲ್ಲಿ 152 ರನ್ ಗೆ ಆಲೌಟಾಯಿತು. ನಂತರ ಅಖಾಡಕ್ಕೆ ಇಳಿದ ಇಂಗ್ಲೆಂಡ್ 110 ರನ್ ಗಳಿಗೆ ಆಲೌಟಾಗಿ 42 ರನ್ ಗಳ ಹಿನ್ನಡೆ ಅನುಭವಿಸಿತು.

ಎರಡನೇ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಬ್ರೈಡನ್ ಕಾರ್ಸ್ (34/4) ಮತ್ತು ಬೆನ್ ಸ್ಟೋಕ್ಸ್ (24/3) ಮಾರಕ ದಾಳಿಗೆ ತತ್ತರಿಸಿ 6 ವಿಕೆಟ್ ಗೆ 132 ರನ್ ಗೆ ಪತನಗೊಂಡಿತು. ಗೆಲ್ಲಲು 175 ರನ್ ಗುರಿ ಪಡೆದ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಇಂಗ್ಲೆಂಡ್ ಪರ ಜಾಕ್ ಕಾರ್ಲೆ (37), ಬೆನ್ ಡಕೆಟ್ (34) ಮೊದಲ ವಿಕೆಟ್ ಗೆ 51 ರನ್ ಜೊತೆಯಾಟದಿಂದ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ನಂತರ ನಾಟಕೀಯ ಕುಸಿತ ಅನುಭವಿಸಿದರೂ ಜೇಕಬ್ ಬೆಥಾಲ್ (40) ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Related Posts

Leave a Reply

Your email address will not be published. Required fields are marked *