ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿ ಪತ್ನಿಯ ವೃತ್ತಿಯ ಬಗ್ಗೆ ಅನುಮಾನ, ಅಸಹನೆಯಿಂದ ವ್ಯಕ್ತಿಯೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
39 ವರ್ಷದ ಆಯೇಷಾ ಸಿದ್ದಿಕಿ ಕೊಲೆಯಾದ ಮಹಿಳೆ, ಕೊಲೆ ಮಾಡಿದ ಆರೋಪಿ ಪತಿ ಸೈಯ್ಯದ್ ಜಬಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆಯೇಷಾ ಸಿದ್ದಿಕಿ ನಗರದ ಮಸಾಜ್ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು, ಆಕೆ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವುದು ಸೈಯ್ಯದ್ ಜಬಿಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಆ ವೃತ್ತಿಯ ಬಗ್ಗೆ ಆರೋಪಿಗೆ ಆಕ್ಷೇಪವಿತ್ತು, ಆತ ಪತ್ನಿ ಆಯೇಷಾಳ ನಡೆತೆ ಬಗ್ಗೆ ಅನುಮಾನ ಪಡುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು.
ಡಿಸೆಂಬರ್ 26ರ ರಾತ್ರಿ ದಂಪತಿ ನಡುವೆ ಇದೇ ಕೆಲಸದ ವಿಚಾರಕ್ಕೆ ಜಗಳ ನಡೆದು ಕೆಲಸ ಬಿಡು ಎಂದು ಆರೋಪಿ ಹೇಳಿದ್ದ, ಆದರೆ ಆಯೇಷಾ ಒಪ್ಪಲಿಲ್ಲ. ಈ ವೇಳೆ ಆಕ್ರೋಶಗೊಂಡ ಸೈಯ್ಯದ್ ಜಬಿ, ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಆಯೇಷಾ ಕುತ್ತಿಗೆಯನ್ನು ಸೀಳಿದ್ದಾನೆ. ಆಕೆ ರಕ್ತಸ್ರಾವದಿಂದ ಸ್ಥಳದಲ್ಲೇ ಅಸು ನೀಗಿದ್ದಾರೆ.
ಮೃತ ಆಯೇಷಾ ಸಿದ್ದಿಕಿಗೆ ಇದು ಮೂರನೇ ಮದುವೆಯಾಗಿತ್ತು. ಆರೋಪಿ ಸೈಯ್ಯದ್ ಜಬಿಗೆ ಎರಡನೇ ಮದುವೆಯಾಗಿತ್ತು. ಮೂರು ತಿಂಗಳ ಹಿಂದಷ್ಟೇ ಈ ಇಬ್ಬರೂ ವಿವಾಹವಾಗಿದ್ದರು. ಪತ್ನಿಯನ್ನು ಹತ್ಯೆ ಮಾಡಿದ ನಂತರ ರಕ್ತಸಿಕ್ತ ಬಟ್ಟೆಯಲ್ಲೇ ಸೈಯ್ಯದ್ ಜಬಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದಾರೆ.


