ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚುನಾವಣೆ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ರಾಜಕೀಯ ಗಿಮಿಕ್ ಮಾಡುವುದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶದಂತೆ ಕರ್ನಾಟಕದ ಬೆಂಗಳೂರಿನಲ್ಲೂ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆ ಧ್ವಂಸ ಮಾಡಲಾಗುತ್ತಿದೆ ಎಂದು ಪಿಣರಾಯಿ ವಿಜಯನ್ ಅಸಮಧಾನ ವ್ಯಕ್ತಪಡಿಸಿರುವುದಕ್ಕೆ ಡಿಸಿಎಂ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕದಲ್ಲಿ ಬುಲ್ಡೋಜರ್ ರಾಜ್ ನಡೆಯುತ್ತಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಪಿಣರಾಯಿ ಹಿರಿಯರು, ಆದರೂ ಅವರು ವಾಸ್ತವ ಅರ್ಥ ಮಾಡಿಕೊಳ್ಳದೆ ಮಾತನಾಡಿದ್ದಾರೆ. ಕೆಲವರು ಡಂಪ್ ಸೈಟ್‌ನಲ್ಲಿ ಅಕ್ರಮವಾಗಿ ವಾಸವಾಗಿದ್ದರು. ನಮ್ಮ ಶಾಸಕರು, ಅಧಿಕಾರಿಗಳು ತೆರವು ಮಾಡಿದ್ದಾರೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಮಗೆ ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಯಾರು ಮನೆ ಕಳೆದುಕೊಂಡಿದ್ದಾರೋ ಅವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡುತ್ತೇವೆ. ನಾವು ಬೂಲ್ಡೋಜರ್ ಪದ್ಧತಿ ಬಳಸಿಲ್ಲ. ಈ ಕುರಿತು ನಮ್ಮ ಪಕ್ಷದ ನಾಯಕ ರಿಗೂ ಮಾಹಿತಿ ನೀಡಿದ್ದೇವೆ. ಇಲ್ಲಿನ ಸ್ಥಿತಿ ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ. ಸರ್ಕಾರಿ ಜಾಗ ಒತ್ತುವರಿ ಮಾಡಲು ಬಿಡಲ್ಲ. ಚುನಾವಣೆ ಸಂದರ್ಭದಲ್ಲಿ ಪಿಣರಾಯಿ ರಾಜಕೀಯ ಗಿಮಿಕ್ ಮಾಡುವುದು ಬೇಡ. ಸರ್ಕಾರಿ ಜಾಗದಲ್ಲಿ ಸ್ಲಂಗಳನ್ನು ಮಾಡಲು ಬಿಡುವುದಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಬೇರೆ ನಗರಗಳಂತೆ ಅಲ್ಲ. ನಮ್ಮಲ್ಲಿ ಹೆಚ್ಚು ಕೊಳಗೇರಿ ಪ್ರದೇಶಗಳಿಲ್ಲ. ಹೊಸದಾಗಿ ಕೊಳಗೇರಿ ಪ್ರದೇಶ ನಿರ್ಮಾಣ ಮಾಡಲು ಬಿಡುವುದಿಲ್ಲ. ಇದು ಸಚಿವ ಕೃಷ್ಣ ಭೈರೇಗೌಡ ಅವರ ಕ್ಷೇತ್ರವಾಗಿದ್ದು, ಅವರು ಬಹಳ ಹಿರಿಯ ನಾಯಕರಿದ್ದು, ಅವರು ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಜಾಗ ಖಾಲಿ ಇದೆ ಎಂದು ಏಕಾಏಕಿ ಗುಡಿಸಲು ಹಾಕಿಕೊಳ್ಳಲು ಆಗುವುದಿಲ್ಲ. ಇದು ಅಲ್ಪಸಂಖ್ಯಾತರು ಅಥವಾ ಬೇರೆ ವಿಚಾರವಲ್ಲ. ಯಾರಿಗಾದರೂ ಜಾಗ ಬೇಕಾಗಿದ್ದರೆ ಅವರು ಅರ್ಹರಾಗಿದ್ದರೆ ಅವರಿಗೆ ಸರ್ಕಾರ ವಸತಿ ನೀಡಲಿದೆ. ಬೇರೆ ಸರ್ಕಾರಗಳು ಜನರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿರಲಿಲ್ಲ. ಸಿಎಂ, ವಸತಿ ಸಚಿವರಾದ ಜಮೀರ್ ಅಹ್ಮದ್ ಸೇರಿದಂತೆ ನಮ್ಮ ಸರ್ಕಾರ ಬಡವರಿಗೆ ಲಕ್ಷಾಂತರ ಮನೆ ನಿರ್ಮಾಣ ಮಾಡಿದೆ. ಅರ್ಹರಿಗೆ ನಾವು ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದರು.
ಅಕ್ರಮವಾಗಿ ನೆಲಸಿರುವವರಿಗೆ ಅರ್ಹತೆ ಇದೆಯೇ ಎಂದು ಕೇಳಿದಾಗ, “ಯಾರೆಲ್ಲಾ ಕರ್ನಾಟಕದಲ್ಲಿ ವಾಸವಿದ್ದು, ದಾಖಲೆ ಹೊಂದಿದ್ದಾರೋ ಅವರಿಗೆ ರಾಜ್ಯದ ಕಾನೂನಿನಂತೆ ಅಗತ್ಯ ನೆರವು ನೀಡಲಾಗುವುದು. ಈ ಕುರಿತು ಸ್ಪಷ್ಟ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಪಿಣರಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಯಲಹಂಕ ಕೋಗಿಲು ಲೇಔಟ್ ಬಳಿ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನೆಲಸಮ ಮಾಡಿದ್ದರು.
ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸ ಮಾಡಿದ್ದು ಆಘಾತಕಾರಿ ಮತ್ತು ನೋವಿನ ಸಂಗತಿ. ಉತ್ತರ ಭಾರತದಲ್ಲಿ ಸಂಘ ಪರಿವಾರ ಅನುಸರಿಸುತ್ತಿರುವ ಅಲ್ಪಸಂಖ್ಯಾತ ವಿರೋಧಿ ಆಕ್ರಮಣಕಾರಿ ರಾಜಕೀಯದ ಮತ್ತೊಂದು ರೂಪ ಕರ್ನಾಟಕದಲ್ಲಿಯೂ ಕಾಣಬಹುದು ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್ಸಿನ ಈ ಕಪಟ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿ ಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು ಎಂದು ಕರೆ ನೀಡಿದ್ದಾರೆ.


