ನಾಲ್ಕು ವರ್ಷಗಳನ್ನು ಸಂಘರ್ಷದಲ್ಲೇ ಕಳೆದ ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಇನ್ನೂ ಮುಂದುವರಿದಿದ್ದು, ಶನಿವಾರ ಮುಂಜಾನೆ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಮೇಲೆ ದೊಡ್ಡ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿವೆ. ಕೀವ್ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಯುದ್ಧ ಭೀತಿ ಆವರಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಎರಡು ದಿನಗಳ ನಂತರ ಮಹತ್ವದ ಸಭೆ ನಿಗದಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದೊಂದಿಗೆ ಶಾಂತಿ ಒಪ್ಪಂದವನ್ನ ರೂಪಿಸುವುದು ಈ ಸಭೆಯ ಮುಖ್ಯ ಗುರಿ. ಈ ಮಧ್ಯೆ ರಷ್ಯಾ ಕೀವ್ ಮೇಲೆ ಭೀಕರ ದಾಳಿ ನಡೆಸಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಕಳವಳ ಸೃಷ್ಟಿಸಿದೆ.
ರಷ್ಯಾದ ಈ ಅನಿರೀಕ್ಷಿತ ದಾಳಿಯನ್ನು ಎದುರಿಸಲು ಉಕ್ರೇನ್‌ನ ವಾಯು ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಾಚರಣೆ ಕೈಗೊಂಡಿವೆ. ರಷ್ಯಾ ಸೇನಾ ಪಡೆ ಯುದ್ಧ ನೌಕೆಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸುತ್ತಿವೆ. ನಮ್ಮ ರಕ್ಷಣಾ ಪಡೆಗಳು ಸನ್ನದ್ಧವಾಗಿದ್ದು, ಶತ್ರುಗಳ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಕೆಲಸ ಸಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಈ ದಾಳಿಯ ಕುರಿತು ರಷ್ಯಾ ಸರ್ಕಾರ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.


