ಆರಂಭಿಕ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಶತಕಗಳ ನೆರವಿನಿಂದ ಕರ್ನಾಟಕ ತಂಡ 8 ವಿಕೆಟ್ ಗಳಿಂದ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಕೇರಳ ತಂಡವನ್ನು ಬಗ್ಗುಬಡಿದಿದೆ.
ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 284 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಕರ್ನಾಟಕ ತಂಡ 48.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭ ಗೆಲುವು ದಾಖಲಿಸಿತು.
ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ (1) ಅವರನ್ನು ಬೇಗನೇ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಜೊತೆಯಾದ ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಪಂದ್ಯದ ದಿಕ್ಕನ್ನೇ ಬದಲಿಸಿದರು.
ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ 2ನೇ ವಿಕೆಟ್ ಗೆ 223 ರನ್ ಜೊತೆಯಾಟ ನಿಭಾಯಿಸಿದರು. ಕರುಣ್ ನಾಯರ್ 130 ಎಸೆತಗಳಲ್ಲಿ 14 ಬೌಂಡರಿ ಸಹಾಯದಿಂದ 130 ರನ್ ಗಳಿಸಿದರು.
ಪಡಿಕ್ಕಲ್ 137 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 124 ರನ್ ಬಾರಿಸಿದರು. ಇದು ಪಡಿಕ್ಕಲ್ ದಾಖಲಿಸಿದ ಸತತ 2ನೇ ಶತಕವಾಗಿದೆ. ಪಡಿಕ್ಕಲ್ ಜಾರ್ಖಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 147 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೇರಳ ತಂಡ 49 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತದಿಂದ ತತ್ತರಿಸಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಾಬಾ ಅಪರಾಜಿತ್ (71 ರನ್, 62 ಎಸೆತ, 8 ಬೌಂಡರಿ, 2 ಸಿಕ್ಸರ್) ಮತ್ತು ಮೊಹಮದ್ ಅಜರುದ್ದೀನ್ (84 ರನ್, 58 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳನ್ನು ಬಾರಿಸಿ ತಂಡವನ್ನು ಆಧರಿಸಿದರು.
ಸಂಕ್ಷಿಪ್ತ ಸ್ಕೋರ್: ಕೇರಳ 50 ಓವರ್ ಗಳಲ್ಲಿ 7 ವಿಕೆಟ್ 284 (ಅಜರುದ್ದೀನ್ ಅಜೇಯ 84, ಅಪರಾಜಿತ್ 71, ವಿಷ್ಣು ವಿನೋದ್ 35, ನಿದೇಶ್ ಅಜೇಯ 34, ಅಭಿಲಾಷ್ 59/3, ಶ್ರೇಯಸ್ ಗೋಪಾಲ್ 61/2). ಕರ್ನಾಟಕ 48.2 ಓವರ್ ಗಳಲ್ಲಿ 2 ವಿಕೆಟ್ 285 (ದೇವದತ್ ಪಡಿಕ್ಕಲ್ 124, ಕರುಣ್ ನಾಯರ್ ಅಜೇಯ 130).


