ಬೆಂಗಳೂರು: ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗೆ ಮಾದರಿಯಾಗಿದ್ದ ಕರ್ನಾಟಕವು ಕಾಂಗ್ರೆಸ್ ಆಡಳಿತದಲ್ಲಿ ಅಧಃಪತನದತ್ತ ಸಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಗುರುವಾರ ಕೆಂಪೇಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿ, ಅಟಲ್ ಪುರಸ್ಕಾರ ಪ್ರದಾನ ಹಾಗೂ ಸುಶಾಸನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.
ಕರ್ನಾಟಕ ಅತ್ಯತ್ತಮ ಆಡಳಿತಕ್ಕೆ ಪ್ರತೀಕವಾಗಿತ್ತು. ಅತ್ಯುತ್ತಮ ಅಭಿವೃದ್ಧಿ ಮಾದರಿ ಅಳವಡಿಸಿಕೊಂಡು ಇಡೀ ರಾಷ್ಟ್ರಕ್ಕೆ ಮೇಲ್ಪಂಕ್ತಿ ಆಗಿತ್ತು. ಆದರೆ, ಈಗಿನ ಸರ್ಕಾರದ ಕೆಟ್ಟ ಆಡಳಿತದಲ್ಲಿ ಎಲ್ಲಾ ಹೆಗ್ಗಳಿಕೆಗಳು ಹೋಗಿ ಅತ್ಯುತ್ತಮ ಎನ್ನುವುದರ ವಿರುದ್ಧ ದಿಕ್ಕಿನಲ್ಲಿ ರಾಜ್ಯವೂ ಹೋಗುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಈಗಿನ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಸಂಪೂರ್ಣವಾಗಿ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕರ್ನಾಟಕ ಮೇರು ಸದೃಶ ರಾಜ್ಯವಾಗಿತ್ತು. ವಾಜಪೇಯಿ ಅವರ ಸ್ಮರಣೆ ಸಂದರ್ಭದಲ್ಲಿ ಈ ಸರ್ಕಾರದ ಬಗ್ಗೆ ಮಾತಾಡಿದರೆ ನಾವು ಸಣ್ಣವರು ಆಗುತ್ತೇವೆ ಎನ್ನುವುದು ನನ್ನ ಭಾವನೆ. ಉತ್ತಮ ಆಡಳಿತದಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜ್ಯ ಕರ್ನಾಟಕ, ಇವತ್ತು ಈ ರಾಜ್ಯಕ್ಕೆ ಏನಾಗಿದೆ? ಒಳ್ಳೆಯ ರಾಜ್ಯದಲ್ಲಿ ಹುಡುಗಾಟಿಕೆ ರಾಜಕೀಯ ನಡೆಯುತ್ತಿದೆ. ಆರೋಗ್ಯ ಶಿಕ್ಷಣ, ಕೃಷಿ, ಕಂದಾಯ ಸೇರಿ ಎಲ್ಲಾ ಇಲಾಖೆಗಳ ಆಡಳಿತ ಹದಗೆಟ್ಟು ಹೋಗಿದೆ. ಇನ್ನಾದರೂ ಜನರು ಆಲೋಚನೆ ಮಾಡಬೇಕಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಆಡಳಿತ ಎಂದರೆ ಕರ್ನಾಟಕ ಎನ್ನುವ ದಿನಗಳು ಮತ್ತೆ ಬರಬೇಕು. ಹಿಂದಿನ ಉತ್ತಮ ಆಡಳಿತ ಮತ್ತೆ ಬರಬೇಕು. ಈ ಸರಕಾರದ ಕೆಟ್ಟ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಈಗಲಾದರೂ ಆಲೋಚನೆ ಮಾಡಬೇಕು ಎಂದು ಈ ವೇದಿಕೆಯ ಮೂಲಕ ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಐಟಿ ಬಿಟಿ ರಾಜಧಾನಿ, ಶಿಕ್ಷಣ ತಂತ್ರಜ್ಞಾನದ ಅವಾಸ್ಥಾನವಾಗಿದ್ದ ಬೆಂಗಳೂರು ನಗರದ ಮೂಲಸೌಕರ್ಯ ಪೂರ್ಣವಾಗಿ ಹಾಳಾಗಿದೆ. ಯಾರಾದರೂ ಪ್ರಾಜ್ಞರು ಉತ್ತಮ ಸಲಹೆ ಕೊಟ್ಟರೆ ಅದನ್ನು ಸ್ವೀಕಾರ ಮಾಡುವ ಮನಸ್ಥಿತಿ ಈ ಸರಕಾರಕ್ಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆಯೇ ಕೆಟ್ಟದಾಗಿ ಹರಿಯಬಿಡುವ ಸಂಸ್ಕೃತಿ ಇವರದು ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ರಾಜ್ಯಕ್ಕೆ ಎಲ್ಲಾ ರೀತಿಯ ಶಕ್ತಿ ಇದೆ. ಜಗತ್ತಿನ ಜತೆ ಸ್ಪರ್ಧಾತ್ಮಕವಾಗಿ ಮುನ್ನಡೆಯುವ ಸಾಮರ್ಥ್ಯವೂ ಇದೆ. ಜಗತ್ತು ಅಭಿವೃದ್ಧಿಯತ್ತ ನಾಗಾಲೋಟದಲ್ಲಿ ಸಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಅಷ್ಟೇ ವೇಗದಲ್ಲಿ ಮುನ್ನಡೆಯುತ್ತಿತ್ತು. ಮೂರನೇ ದೈತ್ಯ ಆರ್ಥಿಕ ಶಕ್ತಿ ಆಗುವುದಕ್ಕೆ ಭಾರತ ದಾಪುಗಾಲು ಇಡುತ್ತಿದೆ. ಹೀಗಿದ್ದರೂ ಕರ್ನಾಟಕ ಯಾವ ದಿಕ್ಕಿಗೆ ಹೋಗುತ್ತಿದೆ. ಹಿಮ್ಮುಖವಾಗಿ ಚಲಿಸುತ್ತಾ ಅಧಃಪತನಕ್ಕೆ ಹೋಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
2006ರಲ್ಲಿ ನಾನು ಬಿಜೆಪಿ ಜತೆ ಸೇರಿ ಮೈತ್ರಿ ಸರಕಾರ ಮಾಡಿದ್ದೆ. ಅಂದು ವಾಜಪೇಯಿ ಅವರ ಸುಶಾಸನ ಪರಿಕಲ್ಪನೆಗೆ ಗೌರವ ತರುವ ರೀತಿಯಲ್ಲಿ ಆಡಳಿತ ಮಾಡಿದ್ದೆವು. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಅಳವಡಿಸಿಕೊಂಡಿದ್ದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದು ಕೇಂದ್ರ ಸಚಿವರು ಹೇಳಿದರು.
ವಾಜಪೇಯಿ ಅವರು ಅಜಾತಶತ್ರು, ರಾಷ್ಟ್ರಕ್ಕೆ ಸುದೀರ್ಘ ಸೇವೆ ಸಲ್ಲಿಸಿ ತಮ್ಮದೇ ಆದ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿ ಹೋಗಿದ್ದಾರೆ. ಅಂತವರ ಹೆಸರಿನಲ್ಲಿ ಶಿಕ್ಷಣ, ವಿಜ್ಞಾನ,ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಅಟಲ್ ಪುರಸ್ಕಾರ ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಪಕ್ಷಬೇಧ ಮರೆತು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದರು ಕೇಂದ್ರ ಸಚಿವರು.
ಅಟಲ್ ಅವರು ಸಣ್ಣ ಕುಟುಂಬದಿಂದ ಬಂದವರು. ಆದರೆ, ಅವರು ಬಹಳ ಎತ್ತರಕ್ಕೆ ಏರಿದರು. ದೇಶ ಕಂಡ ಅತ್ಯಂತ ಶ್ರೇಷ್ಠ ನಾಯಕರಾಗಿ ಬೆಳೆದರು. ಆರಂಭದಲ್ಲಿ ಯಶಸ್ಸು ಕಾಣಲಿಲ್ಲ, ಹೋರಾಟ ಬಿಡಲಿಲ್ಲ. ಅವರ ಹೋರಾಟ ಸುದೀರ್ಘವಾಗಿತ್ತು. ಕೊನೆಗೂ ಯಶಸ್ಸು ಕಂಡರು ಉತ್ತಮ ಆಡಳಿತ ಕೊಟ್ಟರು. ಇಂಥ ಕಾಲದಲ್ಲಿ ಅಟಲ್ ಅವರಂಥ ನಾಯಕರು ವಿರಳ. ವಿದೇಶಾಂಗ ಸಚಿವರಾಗಿ, ಪ್ರತಿಪಕ್ಷ ನಾಯಕರಾಗಿ, ಪ್ರಧಾನಿಯಾಗಿ ಅವರ ಸಾಧನೆ ದೊಡ್ಡದು. ಎರಡು ಸ್ಥಾನದಲ್ಲಿದ್ದ ಬಿಜೆಪಿಯನ್ನು 170 ಸ್ಥಾನಗಳವರೆಗೆ ತೆಗೆದುಕೊಂಡ ಹೋದ ಧೀಮಂತ ನಾಯಕರು ಅವರು ಎಂದು ಕುಮಾರಸ್ವಾಮಿ ಅವರು ಅಟಲ್ ಅವರ ಗುಣಗಾನ ಮಾಡಿದರು.
ಲೋಕಸಭೆಯಲ್ಲಿ ಕೇವಲ ಒಂದು ಮತದಿಂದ ಅಧಿಕಾರ ಕಳೆದುಕೊಂಡು ನಂತರ ಐದು ವರ್ಷ ಆಡಳಿತಕ್ಕೆ ಜನಾದೇಶ ಪಡೆದ ವಾಜಪೇಯಿ ಅವರು; ಜನರ ನಿರೀಕ್ಷೆಗೆ ಮೀರಿ ಕೆಲಸ ಮಾಡಿದರು. ಚತುಷ್ಪಥ ಹೆದ್ದಾರಿ ಯೋಜನೆ ಜಾರಿಗೆ ತಂದು ರಾಷ್ಟ್ರದ ಮೂಲಭೂತ ಸೌಕರ್ಯಕ್ಕೆ ಭದ್ರ ಬುನಾದಿ ಹಾಕಿದವರು ಕೂಡ ವಾಜಪೇಯಿ ಅವರೇ. ಇವತ್ತು ಭಾರತದ ರಸ್ತೆಗಳು ಉತ್ತಮವಾಗಿವೆ, ಬಹುದೊಡ್ಡ ರಸ್ತೆ ಸರಪಳಿಯನ್ನು ಕಾಣುತ್ತಿದ್ದೇವೆ. ಜಾಗತಿಕ ಗುಣಮಟ್ಟದ ರಸ್ತೆಗಳು ನಮ್ಮ ದೇಶದಲ್ಲಿವೆ ಎಂದು ಕೇಂದ್ರಸ್ ಸಚಿವರು ನುಡಿದರು.
ಅಟಲ್ ಅವರ ಅತ್ಯುತ್ತಮ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಅನುದಿನವೂ ಸ್ಮರಿಸುವಂತೆ ಮಾಡಿ, ಅಟಲ್ ಅವರ ಜನ್ಮದಿನವನ್ನು ಸುಶಾಸನ ದಿನ ಎಂದು ಘೋಷಣೆ ಮಾಡಿದರು. ಜನರಿಗೆ ಭರವಸೆ ಕೊಡುತ್ತೇನೆ. ಮುಂದೆ ಕರ್ನಾಟಕದಲ್ಲಿ ಉತ್ತಮ ಆಡಳಿತ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಸಮಾಜದಲ್ಲಿ ನೆಮ್ಮದಿ ಇಲ್ಲ. ಕುಟುಂಬಗಳಲ್ಲಿ ಏನಾಗುತ್ತಿದೆ ಎಂದು ನೋಡಿದರೆ ಆತಂಕ ಆಗುತ್ತದೆ. ಟೆಕ್ನಾಲಜಿ ಬೆಳೆಯುತ್ತಿದೆ, ಆರ್ಥಿಕವಾಗಿ ಶಕ್ತಿವಂತರಾಗುತ್ತಿದ್ದೇವೆ. ಬೆಳಗ್ಗೆ ಎದ್ದು ಟೀವಿ ಹಾಕುವುದಕ್ಕೆ ಭಯವಾಗುತ್ತದೆ. ಯಾರಿಗೂ ನೆಮ್ಮದಿ ಇಲ್ಲ. ನಾನು ಇದೇ ಕಾರಣಕ್ಕೆ ಶಾಲಾ ಹಂತದಲ್ಲಿಯೇ ಭಗವದ್ಗೀತೆ ಬೋಧನೆಯ ಮಾಡಬೇಕು ಎಂದು ಹೇಳಿದೆ. ಅದಕ್ಕೆ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋವಿಂದನ್ ರಂಗರಾಜನ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ. ಎಸ್. ಚಂದ್ರಶೇಖರ ಶೆಟ್ಟಿ, ಬೇಸ್ ಮತ್ತು ಪ್ರಯೋಗ ಸಂಸ್ಥೆಗಳ ಸ್ಥಾಪಕರಾದ ಡಾ. ಹೆಚ್.ಎಸ್. ನಾಗರಾಜು ಅವರಿಗೆ 2025ನೇ ಸಾಲಿನ ಅಟಲ್ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಕೃಷ್ಣೇಗೌಡ ಅವರು ಉಪಸ್ಥಿತರಿದ್ದರು.


