Menu

ಜಗ-ಜೀವನ: ಜನರ ಬಾಳ ಬೀಳಿಸದಿರಲಿ ಬಿದ್ದೇಳುತ್ತಿರುವ ರೂಪಾಯಿ

rupee

ಇದು ಏಕಾಏಕಿ ಆದ ಬೆಳವಣಿಗೆಯಲ್ಲ. ಆರಂಭದಲ್ಲೇ ರೋಗನಿರ್ಣಯ ಸರಿಯಾಗಿ ಆಗದಿದ್ದರೆ ಅದು ಹೇಗೆ ವ್ಯಾಪಿಸುತ್ತದೆಯೋ ಹಾಗೆಯೇ ಈ ರೂಪಾಯಿ ಮೌಲ್ಯ ಕುಸಿತವೂ ಹಲವು ವರ್ಷಗಳಿಂದ ಕಾಡುತ್ತಿರುವ, ಆದರೆ ಪರಿಹಾರ ಕಾಣದ ಸಮಸ್ಯೆಯಾಗಿದೆ.

ಬೀಳುವುದೆಲ್ಲ ಏಳಲೇಬೇಕು ಎಂಬುದು ಸಹಜ ನಿಯಮವಾದರೂ ಬಿದ್ದೇಳುವ ಆ ಕ್ರಿಯೆಯು ಕೆಲವೊಮ್ಮೆ ಬೇಡದ ಪ್ರಪಂಚವನ್ನೇ ನಿರ್ಮಿಸಿಬಿಡುತ್ತದೆ ಎಂಬುದೂ ಅಷ್ಟೇ ಸತ್ಯ.

ಸದ್ಯ ಭಾರತದ ರೂಪಾಯಿಯ ಏರಿಳಿತ ಇದಕ್ಕೆ ಸೂಕ್ತ ಉದಾಹರಣೆ ಎನ್ನಬಹುದು. ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ದೇಶಗಳಲ್ಲಿ ಸಣ್ಣಪುಟ್ಟ ಅಡೆ-ತಡೆ, ಏರಿಳಿತ ಸಾಧಾರಣವೇ ಆದರೂ ರೂಪಾಯಿ ಹಿಡಿದಿರುವ ಮಾರ್ಗ ಮತ್ತು ಅದಕ್ಕೆ ಕೊಡಬೇಕಾದ ಮದ್ದು ಸಾಧಾರಣದ್ದಲ್ಲ ಎಂಬುದನ್ನು ಗಮನಿಸಬೇಕು.

ನಿಜ, ಇದು ಏಕಾಏಕಿ ಆದ ಬೆಳವಣಿಗೆಯಲ್ಲ. ಆರಂಭದಲ್ಲೇ ರೋಗನಿರ್ಣಯ ಸರಿಯಾಗಿ ಆಗದಿದ್ದರೆ ಅದು ಹೇಗೆ ವ್ಯಾಪಿಸುತ್ತದೆಯೋ ಹಾಗೆಯೇ ಈ ರೂಪಾಯಿ ಮೌಲ್ಯ ಕುಸಿತವೂ ಹಲವು ವರ್ಷಗಳಿಂದ ಕಾಡುತ್ತಿರುವ, ಆದರೆ ಪರಿಹಾರ ಕಾಣದ ಸಮಸ್ಯೆಯಾಗಿದೆ.

ಡಿಸೆಂಬರ್ ತಿಂಗಳ ಆರಂಭದಲ್ಲಿ, ಭಾರತೀಯ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಮೊದಲ ಬಾರಿಗೆ ೯೦ರ ಗಡಿ ದಾಟಿ ಕುಸಿತ ಕಂಡಿತು. ರೂಪಾಯಿಯು ಇತರ ಉದಯೋನ್ಮುಖ ಮಾರುಕಟ್ಟೆಗಳ ಕರೆನ್ಸಿಗಳಿಗೆ ಹೋಲಿಸಿದರೆ ಕಡಿಮೆ ಅಸ್ಥಿರತೆಯನ್ನು ಹೊಂದಿದ್ದರೂ ಸಹ, ಈ ವರ್ಷವೊಂದರಲ್ಲೇ ಶೇಕಡಾ ೬.೧೪ರಷ್ಟು ಮೌಲ್ಯ ಕಳೆದುಕೊಂಡಿದೆ. ರೂಪಾಯಿಯ ಈ ನಿರಂತರ ಕುಸಿತವು ಭಾರತದ ರಾಜಕೀಯ ವಲಯ, ಆರ್ಥಿಕ ನೀತಿ ನಿರೂಪಣೆ ಮೇಲೆ ಸಹಜವಾಗಿಯೇ ಪರಿಣಾಮ ಬೀರಿದೆ.

ಈ ಮಹತ್ವದ ಬದಲಾವಣೆಗೆ ಅಂತರರಾಷ್ಟ್ರೀಯ ಹಣಕಾಸು ನಿ (ಐಎಂಎಫ್) ಇಟ್ಟ ಹೆಜ್ಜೆ ಮುನ್ನುಡಿ ಬರೆದಿದೆ. ನವೆಂಬರ್ ೨೬ರಂದು ಐಎಂಎಫ್ ಭಾರತದ ವಿನಿಮಯ ದರ ವ್ಯವಸ್ಥೆಯನ್ನು ’ಸ್ಥಿರ’ (ಸ್ಟೇಬಲ್) ವರ್ಗದಿಂದ ’ಕ್ರಾಲ್-ಲೈಕ್ ಅರೇಂಜ್ಮೆಂಟ್’ (ಹಂತಹಂತವಾಗಿ ಬದಲಾಗುವ ವ್ಯವಸ್ಥೆ) ವರ್ಗಕ್ಕೆ ಬದಲಾಯಿಸಿದೆ.

ಇದರರ್ಥ ರೂಪಾಯಿ ಮೌಲ್ಯವು ಮುಕ್ತವಾಗಿ ಏರಿಳಿತ ಕಾಣಲು ಅವಕಾಶವಿಲ್ಲದಿದ್ದರೂ, ನಿಯಂತ್ರಿತ ಹಂತಗಳಲ್ಲಿ ಬದಲಾಗಬಹುದು. ಈ ವ್ಯವಸ್ಥೆಯನ್ನು ’ಕ್ರಾಲಿಂಗ್ ಪೆಗ್’ ಎಂದೂ ಕರೆಯಲಾಗುತ್ತದೆ. ರೂಪಾಯಿಗೆ ಹೆಚ್ಚಿನ ಬಳುಕನ್ನು ನೀಡುವುದರಿಂದ ಭಾರತವು ಬಾಹ್ಯ ಆರ್ಥಿಕ ಆಘಾತಗಳನ್ನು ಸಮರ್ಥವಾಗಿ ಎದುರಿಸಲು, ದುಬಾರಿ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಹೊರೆಯನ್ನು ತಗ್ಗಿಸಲು ಮತ್ತು ಆರ್ಥಿಕ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂಬುದು ಐಎಂಎಫ್ ಅಭಿಪ್ರಾಯ.

ಆದರೆ ಭಾರತದಂತಹ ಆಮದು ಅವಲಂಬಿತ ಆರ್ಥಿಕತೆಯಲ್ಲಿ ಇದು ಅಪಾಯಕಾರಿ ಪ್ರಯೋಗವಾಗುವ ಸಾಧ್ಯತೆಯೇ ಹೆಚ್ಚಿದೆ.

ಸೈದ್ಧಾಂತಿಕವಾಗಿ ನೋಡಿದರೆ ರೂಪಾಯಿ ಮೌಲ್ಯ ಕುಸಿತದಿಂದ ರಫ್ತು ವಲಯಕ್ಕೆ ಹೆಚ್ಚಿನ ಸ್ಪರ್ಧಾತ್ಮಕ ಶಕ್ತಿ ಸಿಗಲಿದೆ. ಜವಳಿ ಮತ್ತು ಔಷಧ ಕ್ಷೇತ್ರಗಳು ಡಾಲರ್ ಬೆಲೆಯಿಂದ ಲಾಭ ಪಡೆಯಬಹುದು, ಇದು ದೇಶದ ವ್ಯಾಪಾರ ಕೊರತೆಯನ್ನು ನೀಗಿಸಲು ಸಹಕಾರಿ.

ಆದರೆ, ಭಾರತದ ವಾಸ್ತವ ಸ್ಥಿತಿ ಇದಕ್ಕೆ ಭಿನ್ನವಾಗಿದೆ. ಭಾರತವು ತನ್ನ ಬಳಕೆಯ ಶೇಕಡಾ ೮೦ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ವ್ಯಾಪಾರ ಕೊರತೆಯು ಗಣನೆಗೆ ಬರುತ್ತದೆ.

ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಪ್ರತಿ ಬ್ಯಾರೆಲ್ ಆಮದು ತೈಲದ ಬೆಲೆಯೂ ಹೆಚ್ಚಾಗುತ್ತದೆ. ಇದರಿಂದಾಗಿ ತೈಲ ಬೆಲೆ ಏರಿಕೆ ಮತ್ತು ವಿನಿಮಯ ದರದ ಏರಿಳಿತಗಳಿಗೆ ಭಾರತವು ಹೆಚ್ಚು ತುತ್ತಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಭಾರತವು ಎಥೆನಾಲ್ ಮಿಶ್ರಿತ ತೈಲದ ವ್ಯಾಪಕ ಬಳಕೆಗೆ ಮುಂದಾಗಿದ್ದರೂ ಅದರ ತೈಲ ಆಮದು ಪ್ರಮಾಣ ಹೆಚ್ಚೇನೂ ತಗ್ಗಿಲ್ಲ.

ಸಾಲದ ಹೊರೆಯ ಕಂಟಕ

ಪ್ರಸ್ತುತ ಸರ್ಕಾರದ ಸಾಲವು ಜಿಡಿಪಿಯ ಶೇಕಡಾ ೮೧.೯ರಷ್ಟಿದ್ದು, ಇದು ಸರ್ಕಾರದ ಆರ್ಥಿಕ ಸ್ವಾಯತ್ತತೆಯನ್ನು ಗಮನಾರ್ಹವಾಗಿ ಕುಗ್ಗಿಸಿದೆ. ಹಣಕಾಸಿನ ಸ್ಥಿರತೆಗೆ ಧಕ್ಕೆಯಾಗದಂತೆ ವೆಚ್ಚ ಮಾಡುವ ಅಥವಾ ತೆರಿಗೆ ಕಡಿತಗೊಳಿಸುವ ಸರ್ಕಾರದ ಸಾಮರ್ಥ್ಯಕ್ಕೆ ಇದರಿಂದ ಅಡ್ಡಿಯಾಗಿದೆ.

ರೂಪಾಯಿ ಮೌಲ್ಯ ಕುಸಿತದಿಂದಾಗಿ ಜಿಡಿಪಿಯ ಶೇಕಡಾ ೧೯.೧೫ರಷ್ಟಿರುವ ವಿದೇಶಿ ಕರೆನ್ಸಿ ಸಾಲವನ್ನು ಮರುಪಾವತಿಸುವ ಹೊರೆ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡ ಜನರಿಗೆ ನೆರವಾಗಲು ಇಂಧನ ಅಥವಾ ಆಹಾರದ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಸರ್ಕಾರಕ್ಕೆ ಹೆಚ್ಚಿನ ಅವಕಾಶವಿಲ್ಲ.

ಇತ್ತೀಚಿನ ಜಿಎಸ್ಟಿ ಸುಧಾರಣೆಗಳು ಮತ್ತು ವಿತ್ತೀಯ ಕೊರತೆಯನ್ನು ತಗ್ಗಿಸುವ ಅನಿವಾರ್ಯತೆಯು ಇಂತಹ ಹಸ್ತಕ್ಷೇಪಗಳನ್ನು ಇನ್ನಷ್ಟು ಕಷ್ಟಕರವಾಗಿಸಿವೆ.

ಈ ಆರ್ಥಿಕ ಬದಲಾವಣೆಯ ಸಾಮಾಜಿಕ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹಣದುಬ್ಬರದಿಂದಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿ ಕುಸಿಯುತ್ತಿದ್ದರೆ, ಶ್ರೀಮಂತರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.

ಆರ್ಥಿಕ ಅಸಮಾನತೆ ಹೆಚ್ಚಳ

ಇದರಿಂದಾಗಿ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಐಎಂಎಫ್‌ನ ವರ್ಗೀಕರಣವು ವಿದೇಶಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆಯಾದರೂ, ರೂಪಾಯಿಯ ಇತ್ತೀಚಿನ ಅಸ್ಥಿರತೆಯು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ವಿನಿಮಯ ದರದಲ್ಲಿನ ಬದಲಾವಣೆಯಿಂದ ಹೂಡಿಕೆದಾರರು ಹಣ ಕಳೆದುಕೊಳ್ಳುವ ಅಪಾಯವಿದ್ದು, ಜಾಗತಿಕ ಒತ್ತಡದ ಸಂದರ್ಭದಲ್ಲಿ ಬಂಡವಾಳವು ದೇಶದಿಂದ ಹೊರಹೋಗುವ ಭೀತಿಯೂ ಇದೆ.

ರೂಪಾಯಿ ಮೌಲ್ಯ ಕುಸಿತದಿಂದ ಭಾರತೀಯ ವಸ್ತುಗಳು ಡಾಲರ್ ಲೆಕ್ಕದಲ್ಲಿ ಅಗ್ಗವಾಗಿ ಕಂಡರೂ, ಏರುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಅಸ್ಥಿರತೆಯು ವಿದೇಶಿ ನೇರ ಹೂಡಿಕೆದಾರರನ್ನು ಹಿಂದೇಟು ಹಾಕುವಂತೆ ಮಾಡುತ್ತಿದೆ. ಈ ಪರಿಸ್ಥಿತಿಯು ಕೈಗಾರಿಕಾ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಅಲ್ಪ ಲಾಭದಲ್ಲಿ ಕೆಲಸ ಮಾಡುವ ಎಂಎಸ್‌ಎಂಇ ವಲಯದ ಮೇಲೆ ತೀವ್ರ ಒತ್ತಡ ಹೇರುತ್ತಿದೆ.

ರಿಸರ್ವ್ ಬ್ಯಾಂಕ್ ಈಗ ನೇರವಾಗಿ ರೂಪಾಯಿ ಮೌಲ್ಯವನ್ನು ರಕ್ಷಿಸುವ ಬದಲು, ಬಡ್ಡಿದರಗಳ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವತ್ತ ಗಮನ ಹರಿಸಬೇಕಿದೆ. ಆದರೆ ತೈಲ ಮತ್ತು ಆಹಾರ ಬೆಲೆಗಳ ಏರಿಕೆಯಿಂದ ಉಂಟಾಗುವ ಆಘಾತಗಳನ್ನು ನಿಭಾಯಿಸುವುದು ಅದಕ್ಕೆ ದೊಡ್ಡ ಸವಾಲಾಗಿದೆ.

ನಮ್ಮ-ನಿಮ್ಮ ಜೇಬಿಗೂ ಭಾರ

ಭಾರತೀಯ ರೂಪಾಯಿ ಮೌಲ್ಯವು ೯೦ರ ಗಡಿಯನ್ನು ದಾಟಿರುವುದು ಕೇವಲ ಅಂಕಿಅಂಶಗಳ ಆಟವಲ್ಲ; ಇದು ಪ್ರತಿಯೊಬ್ಬ ಭಾರತೀಯನ ಮಾಸಿಕ ಬಜೆಟ್ ಮತ್ತು ವೈಯಕ್ತಿಕ ಹಣಕಾಸಿನ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.

ರೂಪಾಯಿಯ ಈ ಕುಸಿತವು ಮೊದಲು ಬಡಿಯುವುದು ನಿಮ್ಮ ಅಡುಗೆಮನೆ ಮತ್ತು ಸಾರಿಗೆ ವೆಚ್ಚದ ಮೇಲೆ. ಭಾರತವು ತನ್ನ ಕಚ್ಚಾ ತೈಲದ ಅಗತ್ಯಕ್ಕಾಗಿ ಬಹುಪಾಲು ವಿದೇಶಗಳನ್ನೇ ಅವಲಂಬಿಸಿರುವುದರಿಂದ, ಡಾಲರ್ ಎದುರು ರೂಪಾಯಿ ದುರ್ಬಲಗೊಂಡಾಗ ತೈಲ ಕಂಪನಿಗಳು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಇದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ದಾರಿಯಾಗುತ್ತದೆ. ಇಂಧನ ಬೆಲೆ ಹೆಚ್ಚಾದಂತೆ ಸರಕು ಸಾಗಣೆ ವೆಚ್ಚವೂ ಏರುತ್ತದೆ, ಇದರಿಂದಾಗಿ ದಿನಸಿ ಪದಾರ್ಥಗಳಿಂದ ಹಿಡಿದು ತರಕಾರಿಗಳವರೆಗೆ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಕಂಡು ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತವೆ.

ಮಧ್ಯಮ ವರ್ಗದ ಕುಟುಂಬಗಳ ಪಾಲಿಗೆ ವಿದೇಶಿ ಶಿಕ್ಷಣ ಮತ್ತು ಪ್ರವಾಸ ಎಂಬುದು ಈಗ ಅತ್ಯಂತ ದುಬಾರಿ ಕನಸಾಗಿ ಪರಿಣಮಿಸಲಿದೆ. ಅಮೆರಿಕ ಅಥವಾ ಯುರೋಪಿನಂತಹ ದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರು ಈಗ ಶಿಕ್ಷಣ ಶುಲ್ಕ ಮತ್ತು ಜೀವನೋಪಾಯದ ವೆಚ್ಚಕ್ಕಾಗಿ ಮೊದಲಿನಿಗಿಂತ ಹೆಚ್ಚಿನ ಹಣವನ್ನು ಹೊಂದಿಸಬೇಕಾಗುತ್ತದೆ.

ಇದು ಕೇವಲ ಶುಲ್ಕದ ವಿಷಯವಲ್ಲ, ವಿದೇಶಿ ವಿನಿಮಯ ದರದಲ್ಲಿನ ಸಣ್ಣ ಬದಲಾವಣೆಯೂ ಲಕ್ಷಾಂತರ ರೂಪಾಯಿಗಳ ಹೆಚ್ಚುವರಿ ಹೊರೆಗೆ ಕಾರಣವಾಗುತ್ತದೆ. ಅಂತೆಯೇ, ವಿದೇಶಿ ಪ್ರವಾಸಕ್ಕೆ ಯೋಜಿಸುತ್ತಿರುವವರು ವಿಮಾನ ಟಿಕೆಟ್ಟಿಂದ ಹಿಡಿದು ಅಲ್ಲಿನ ಹೋಟೆಲ್ ವೆಚ್ಚದವರೆಗೆ ಎಲ್ಲದಕ್ಕೂ ಶೇಕಡಾ ೬ ರಿಂದ ೮ ರಷ್ಟು ಹೆಚ್ಚು ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹಣಕಾಸಿನ ಹೂಡಿಕೆಯ ದೃಷ್ಟಿಯಿಂದ ನೋಡುವುದಾದರೆ, ರೂಪಾಯಿಯ ಅಸ್ಥಿರತೆಯು ಷೇರು ಮಾರುಕಟ್ಟೆಯಲ್ಲಿ ಕಂಪನಗಳನ್ನು ಉಂಟುಮಾಡಬಹುದು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರೂಪಾಯಿ ಮೌಲ್ಯದ ಕುಸಿತದಿಂದ ಉಂಟಾಗುವ ನಷ್ಟವನ್ನು ತಪ್ಪಿಸಲು ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹಿಂಪಡೆಯುವ ಸಾಧ್ಯೆಗಳಿವೆ. ಇದರಿಂದಾಗಿ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳ ಮೇಲೆ ಆಧಾರಿತವಾಗಿರುವ ನಿಮ್ಮ ಹೂಡಿಕೆಯ ಮೌಲ್ಯವು ತಾತ್ಕಾಲಿಕವಾಗಿ ಕುಸಿಯಬಹುದು.

ಮತ್ತೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ಕರೆನ್ಸಿ ಏರಿಳಿತದ ಸಮಯದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡುವುದರಿಂದ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುವ ಸಾಧ್ಯತೆ ಇರುತ್ತದೆ. ಇದು ಹಳೆಯ ಹೂಡಿಕೆದಾರರಿಗೆ ಲಾಭದಾಯಕವಾದರೂ, ಹೊಸದಾಗಿ ಚಿನ್ನ ಖರೀದಿಸುವವರಿಗೆ ಆರ್ಥಿಕ ಹೊರೆಯಾಗಲಿದೆ.

ಸಂಭಾವ್ಯ ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ವೇಳೆ ಬಡ್ಡಿದರಗಳನ್ನು ಹೆಚ್ಚಿಸಿದರೆ, ಅದು ನಿಮ್ಮ ಗೃಹ ಸಾಲ ಅಥವಾ ವಾಹನ ಸಾಲದ ಇಎಂಐ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹೀಗಾಗಿ, ಪ್ರಸ್ತುತ ಸನ್ನಿವೇಶದಲ್ಲಿ ವೈಯಕ್ತಿಕ ಹಣಕಾಸಿನ ನಿರ್ವಹಣೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯವಾಗಿದೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಮತ್ತು ಬಡ್ಡಿದರ ಏರಿಳಿತಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆಗಳನ್ನು ಮರುಹೊಂದಿಸುವುದು ಈ ಆರ್ಥಿಕ ಸವಾಲನ್ನು ಎದುರಿಸಲು ಇರುವ ಪ್ರಮುಖ ಮಾರ್ಗಗಳಾಗಿವೆ.

ದೊಡ್ಡ ಸವಾಲು

ದೇಶದ ಆರ್ಥಿಕತೆ ಮೋದಿ ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಿಂದೆ ಡಾಲರ್ ಮೌಲ್ಯ ಕುಸಿದಾಗ ಉದ್ದುದ್ದದ ಭಾಷಣ ಬಿಗಿದಿದ್ದ ಇದೇ ನಾಯಕರು ಈಗ ಪರಿಸ್ಥಿತಿ ಹದಗೆಡುವುದನ್ನು ಸಹಿಸಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ ಇದು ಮಾತನಾಡಿಷ್ಟು ಸುಲಭವಲ್ಲ ಎಂಬುದು ಅವರಿಗೂ ತಿಳಿದಿದೆ.

ಈ ಸಂಕೀರ್ಣ ಆರ್ಥಿಕ ಪರಿಸ್ಥಿತಿಯನ್ನು ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನಿಭಾಯಿಸುವುದು ಭಾರತದ ಆರ್ಥಿಕ ನಾಯಕತ್ವಕ್ಕೆ ಎದುರಾಗಿರುವ ಅತಿ ದೊಡ್ಡ ಪರೀಕ್ಷೆ ಎಂದರೆ ಅದು ತಪ್ಪಲ್ಲ.

-ಕೆ.ಎಸ್ ಜಗನ್ನಾಥ್, ಹಿರಿಯ ಪತ್ರಕರ್ತ

Related Posts

Leave a Reply

Your email address will not be published. Required fields are marked *