ರಿಲಯನ್ಸ್ ಗ್ರೂಪ್‌ನ ಅನಿಲ್ ಅಂಬಾನಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ವಂಚನೆ ಎಂದು ಬ್ಯಾಂಕುಗಳ ಒಕ್ಕೂಟ ಈಗಾಗಲೇ ಘೋಷಿಸಿದ್ದು, ಬ್ಯಾಂಕ್‌ಗಳ ಈ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಈ ಹಿಂದಿನ ಎಲ್ಲ ಮತ್ತು ಭವಿಷ್ಯದ ಕ್ರಮಗಳಿಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಬ್ಯಾಂಕುಗಳು ಕ್ರಮ ಕೈಗೊಂಡಿರುವ ಆಧಾರವೇ ಸಂಶಯಾಸ್ಪದ ಎಂಬುದು ಸ್ಪಷ್ಟ, ವಿಚಾರಣೆ ಇಲ್ಲದೆ ಇಂಥ ಕ್ರಮಗಳನ್ನು ಮುಂದುವರಿಸಲು ಅವಕಾಶ ನೀಡುವುದು ಸರಿಯಲ್ಲ ಎಂದು ನ್ಯಾಯ ಮೂರ್ತಿ ಮಿಲಿಂದ್ ಜಾಧವ್ ಅವರಿದ್ದ ಪೀಠ ಹೇಳಿದೆ.
ಬ್ಯಾಂಕ್ ಖಾತೆಗಳನ್ನು ವಂಚನೆ ಖಾತೆ ಎಂದು ವರ್ಗೀಕರಿಸುವ ಬ್ಯಾಂಕ್‌ಗಳ ನಿರ್ಧಾರವನ್ನು ಪ್ರಶ್ನಿಸಿ ಅಂಬಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಬರೋಡಾ ಈಗಾಗಲೇ ತೆಗೆದುಕೊಂಡ ಕ್ರಮಗಳಿಗೆ ತಡೆ ನೀಡುವ ಮೂಲಕ ಅಂಬಾನಿಗೆ ನೀಡಲಾದ ಶೋಕಾಸ್ ನೋಟಿಸ್ ಗಳಿಗೂ ತಡೆ ನೀಡಿದಂತಾಗಿದೆ.
ಬಿಡಿಒ ಇಂಡಿಯಾ ಸಿದ್ಧಪಡಿಸಿದ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್ ಹೇಳಿದೆ. ಖಾತೆಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, ಸಾಲ ನಿರಾಕರಣೆ ಮಾಡುವುದು, ಕ್ರಿಮಿನಲ್ ಎಫ್‌ಐಆರ್‌ಗಳು ಪ್ರಸಿದ್ಧಿಗೆ ಧಕ್ಕೆ ತರುತ್ತದೆ. ನ್ಯಾಯಾಲಯವು ಮಧ್ಯಂತರ ರಕ್ಷಣೆ ನೀಡಿದೆ, ವಿಚಾರಣೆ ಮುಂದುವರಿಯಲಿದೆ ಎಂದು ತಿಳಿಸಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಇತರ ಕಂಪನಿಗಳು ಬ್ಯಾಂಕುಗಳಿಂದ ಪಡೆದ ₹31,580 ಕೋಟಿ ಸಾಲವನ್ನು ಉದ್ದೇಶಿತ ಉದ್ದೇಶಕ್ಕೆ ಬಳಸದೆ ಇತರ ಗ್ರೂಪ್ ಕಂಪನಿಗಳಿಗೆ ವರ್ಗಾಯಿಸಿವೆ ಎಂದು ಬ್ಯಾಂಕುಗಳು ಆರೋಪಿಸಿವೆ. ತನಿಖೆ ನಡೆಯುತ್ತಿದ್ದು, ಇಡಿ ಅನಿಲ್ ಅಂಬಾನಿ ಗ್ರೂಪ್‌ಗೆ ಸೇರಿದ ₹10,117 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.


