Thursday, December 25, 2025
Menu

ಡಿಸೆಂಬರ್ 28ರಂದು ಜನರಾಜ್ಯೋತ್ಸವ ಸಂಭ್ರಮ

ಎಲ್ಲಾ ಕನ್ನಡಪರ ಸಂಘಟನೆಗಳು, ಚಳವಳಿಗಾರರು, ಸಾಹಿತ್ಯ-ಸಾಂಸ್ಕೃತಿಕ ವೇದಿಕೆಗಳು ಹಾಗೂ ಯುವ ಹೋರಾಟಗಾರರು ಕನ್ನಡದ ನೆಲ, ಜಲ, ರಾಜ್ಯಭಾಷೆ ಕನ್ನಡದ ಗೌರವಕ್ಕಾಗಿ ನಡೆದಿರುವ ಸಂಕೇತವಾಗಿ ಮೊದಲ ಬಾರಿಗೆ ಜನರಾಜ್ಯೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಡಿಸೆಂಬರ್ 28 ರಂದು ಜನರಾಜ್ಯೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಗ್ರ್ಯಾಂಡ್‌ನಲ್ಲಿ ಮಧ್ಯಾಹ್ನ ಮೂರು
ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಕರ್ನಾಟಕ ಹೆಸರಿನ ನಾಮಕರಣವಾಗಿ 51ನೇ ವರ್ಷದ ಹೊಸ್ತಿಲಲ್ಲಿರುವಾಗ ಒಂದು ಕಾಲದಲ್ಲಿ ವಿಧಾನಸಭೆಯಲ್ಲಿದ್ದ ಕನ್ನಡ ಹೋರಾಟಗಾರರ ಪ್ರಾತಿನಿಧ್ಯ ಈಗ ಯಾಕೆ ಇಲ್ಲ, ಕನ್ನಡಿಗರ ಉದ್ಯೋಗ, ಮೀಸಲಾತಿ, ದ್ವಿಭಾಷಾ ನೀತಿ, ಹಿಂದಿ ಹೇರಿಕೆ ವಿಚಾರಗಳ ಕುರಿತು ಕನ್ನಡ ಚಳವಳಿಗಾರರೆಲ್ಲರೂ ಒಂದೆಡೆ ಮುಕ್ತವಾಗಿ ಚರ್ಚಿಸಲಿದ್ದಾರೆ.

ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂದಿನ ಶಾಸಕರಾಗಿದ್ದ, ಕನ್ನಡದ ಹಿರಿಯ ಹೋರಾಟಗಾರ ‘ವಾಟಾಳ್ ನಾಗರಾಜ್’ ಕನ್ನಡಿಗರ ಪರವಾಗಿ ಸನ್ಮಾನಿಸಲಾಗುವುದು. ‘ಜನರಾಜ್ಯೋತ್ಸವ’ದ ಮೂಲಕ ಸರ್ಕಾರಕ್ಕೊಂದು ಸ್ಪಷ್ಟ ಸಂದೇಶ ನೀಡಲಾಗುವುದು ಎಂದು ಕನ್ನಡ ಚಳವಳಿಗಾರರ ಸಮಿತಿ ಸ್ಪಷ್ಟಪಡಿಸಿದೆ.

ವಾಟಾಳ್ ನಾಗರಾಜ್ ಐದು ಬಾರಿ ಶಾಸಕರಾಗಿ ಕನ್ನಡದ ಜನಸಮುದಾಯವನ್ನು ಪ್ರತಿನಿಧಿಸಿದ್ದಾರೆ. ಅವರು ವಿಧಾನಸಭೆಯಲ್ಲಿ ಭಾಷಣ ಮಾಡಿ ಕನ್ನಡಕ್ಕಾಗಿ ಸಭಾತ್ಯಾಗ ಮಾಡಿದ ಪ್ರಸಂಗಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಸಂಜೆ ಕನ್ನಡದ ಖ್ಯಾತ ಜನಪದ ಗಾಯಕರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 28 ರಂದು ಜನರಾಜ್ಯೋತ್ಸವ ಆಚರಣೆ ನಡೆಯಲಿದ್ದು ಮುಂದೆ ಪ್ರತಿ ವರ್ಷ ಒಂದು ದಿನಾಂಕ ನಿರ್ಧರಿಸಿ, ಶಾಶ್ವತ ‘ಜನರಾಜ್ಯೋತ್ಸವ’ವಾಗಿ ಆಚರಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಮಿತಿ ಹೇಳಿದೆ.

Related Posts

Leave a Reply

Your email address will not be published. Required fields are marked *