ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಆಪ್ತ ಕಾರ್ಯದರ್ಶಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ವಿಭಾಗದ ನಿರ್ದೇಶಕ ಸರ್ಫ್ರಾಜ್ ಖಾನ್ ಕಚೇರಿ, ಮನೆಗಳು, ರೆಸಾರ್ಟ್‌ಗಳಿಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು 14.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಸರ್ಫ್ರಾಜ್ ಖಾನ್ ಮನೆ, ರೆಸಾರ್ಟ್, ವಾಣಿಜ್ಯ ಕಟ್ಟಡಗಳು ಹಾಗೂ ಎಸ್ಟೇಟ್‌ಗಳೂ ಸೇರಿದಂತೆ 13 ಸ್ಥಳಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆಸಿತ್ತು. ಬೆಂಗಳೂರಿನ ಹಲಸೂರಿನಲ್ಲಿರುವ ಮನೆ ಮತ್ತು ಸಂಬಂಧಿಕರ ಮನೆಗಳೂ ಸೇರಿದಂತೆ 5 ಕಡೆ ದಾಳಿ ನಡೆದಿದೆ. ಕೊಡಗು ಜಿಲ್ಲೆಯಲ್ಲಿರುವ ಅವರ ಕಾಫಿ ಎಸ್ಟೇಟ್‌ಗಳು ಹಾಗೂ ಎಚ್.ಡಿ.ಕೋಟೆಯಲ್ಲಿನ ರೆಸಾರ್ಟ್ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ.
ಸರ್ಫ್ರಾಜ್ ಖಾನ್ ವಿರುದ್ಧ ಬಾಗಲಕೋಟೆಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಅದರ ಅನ್ವಯ ಬೆಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳ ದಾಖಲೆಗಳು ಸಿಕ್ಕಿವೆ. ಬೇನಾಮಿ ಹೆಸರಿನ ಆಸ್ತಿ ಕುರಿತು ತನಿಖೆ ನಡೆಯುತ್ತಿದೆ.
ಸರ್ಫ್ರಾಜ್ ಖಾನ್ ಮತ್ತು ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ಹಣ ಜಪ್ತಿ ಮಾಡಲಾಗಿದೆ. ಅವರ ಆಸ್ತಿ ಮೌಲ್ಯವು ಅಧಿಕೃತ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಿದೆ. ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತೆರಿಗೆ ವಂಚನೆ ದೂರಿನ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಈ ಹಿಂದೆ ಸಚಿವ ಜಮೀರ್ ಮನೆಯಲ್ಲಿ ಶೋಧ ನಡೆಸಿದ್ದರು. ಆಗ ಪತ್ತೆಯಾಗಿದ್ದ ಹಣಕಾಸು ಲೆಕ್ಕಪತ್ರಗಳನ್ನು ಇಡಿ ಲೋಕಾಯುಕ್ತ ಪೊಲೀಸರಿಗೆ ಹಸ್ತಾಂತರಿಸಿ ತನಿಖೆ ನಡೆಸುವಂತೆ ಕೋರಿತ್ತು. ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು ಸಚಿವ ಜಮೀರ್ ಆಪ್ತ ಕಾರ್ಯದರ್ಶಿಸರ್ಫ್ರಾಜ್ ಖಾನ್ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ.


