ಚಿತ್ರದುರ್ಗದ ಹಿರಿಯೂರು ನಗರದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ತನ್ನ ಎರಡು ವರ್ಷದ ಮಗುವನ್ನು ಕೊಪ್ಪಳ ಮೂಲದವರಿಗೆ ಐವತ್ತು ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ.
ಕೆಲವು ದಿನಗಳಿಂದ ಮಗು ಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ಚಿತ್ರದುರ್ಗ ಜಿಲ್ಲಾ ಬಾಲಭವನ ಅಧಿಕಾರಿ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ತಾಯಿ ನಡೆಸಿರುವ ಈ ಕೃತ್ಯ ಬಯಲಾಗಿದೆ.
ಮಗುವನ್ನು ಮಾರಾಟ ಮಾಡಿರುವ ಹುಳಿಯಾರು ರಸ್ತೆಯ ನಿವಾಸಿ ಐಶ್ವರ್ಯ ವಿರುದ್ಧ ಹಿರಿಯೂರು ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದಾಗ ಅಸಲಿ ವಿಚಾರ ತಿಳಿದು ಪೊಲೀಸರಿಗೆ ಅಚ್ಚರಿಯಾಗಿದೆ.
ಮಗುವಿನ ತಾಯಿ ಐಶ್ವರ್ಯಾಗೆ ಹೂವಿನಹೊಳೆ ಗ್ರಾಮದ ಚಂದ್ರಪ್ಪ ಜೊತೆ ಅಕ್ರಮ ಸಂಬಂಧವಿದೆ. ಅವರ ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತದೆ ಎಂದು ಇಬ್ಬರೂ ಸೇರಿ ಕೊಪ್ಪಳ ಮೂಲದವರಿಗೆ ಮಗುವನ್ನು 50,000 ರೂ.ಗೆ ಮಾರಾಟ ಮಾಡಿದ್ದಾರೆ.
ಮಗು ಮಾರಾಟ ಪ್ರಕರಣ ಡಿ.19ರಂದು ನಡೆದಿದ್ದು, ಆರೋಪಿ ತಾಯಿಯನ್ನು ಹಿರಿಯೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಚಂದ್ರಪ್ಪ ಪರಾರಿಯಾಗಿದ್ದಾನೆ. ಮಗು ಕೊಂಡುಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


