Wednesday, December 24, 2025
Menu

ನದಿ ಜೋಡಣೆಯಲ್ಲಿ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರು ನಿಗದಿ: ಕೇಂದ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ

DK Shivakumar

ನವದೆಹಲಿ: “ನದಿ ಜೋಡಣೆ ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನೀಡಬೇಕು. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.

“ನದಿ ಜೋಡಣೆ ವಿಚಾರವಾಗಿ ಕೇಂದ್ರ ಜಲ ಶಕ್ತಿ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಯನ್ನು ರಚಿಸಲಾಗಿದ್ದು, ಎಲ್ಲಾ ರಾಜ್ಯಗಳು ಅದರ ಸದಸ್ಯರಾಗಿರುತ್ತವೆ. ಮಂಗಳವಾರ ಇದರ 24ನೇ ಸಭೆ ನಡೆದಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಗೋದಾವರಿ ಹಾಗೂ ಕಾವೇರಿ, ಬೇಡ್ತಿ ಹಾಗೂ ವರದಾ ನದಿ ಜೋಡಣೆ ಬಗ್ಗೆ ಚರ್ಚೆ ನಡೆದಿದೆ” ಎಂದರು.

“ಗೋದಾವರಿ ಹಾಗೂ ಕಾವೇರಿ ನದಿ ಜೋಡಣೆ ಯೋಜನೆಯ ಮೊದಲ ಹಂತದಲ್ಲಿ 148 ಟಿಎಂಸಿ ನೀರನ್ನು ತಿರುಗಿಸಲಾಗುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ ನಿಗದಿ ಮಾಡಿರುವುದು ಕೇವಲ 15.90 ಟಿಎಂಸಿ ನೀರು ಮಾತ್ರ. ನೀರನ್ನು ಯಾವ ಕಡೆ ನೀಡುತ್ತೀರಿ ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬ ಬೇಡಿಕೆ ಸಭೆಯ ಮುಂದಿಟ್ಟಿದ್ದೇವೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆ ನಮ್ಮ ರಾಜ್ಯದೊಳಗೆ ಮಾಡಲಿದ್ದು, 18.50 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ಇದೆ. ಈ ಎರಡೂ ಯೋಜನೆಗಳಿಂದ ಕರ್ನಾಟಕಕ್ಕೆ ಒಟ್ಟು 34.40 ಟಿಎಂಸಿ ನೀರನ್ನು ನಿಗದಿ ಮಾಡಲಾಗಿದೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆಗೆ ಡಿಪಿಆರ್ ತಯಾರಿಸಲು ನಾವು ಅನುಮತಿಯನ್ನು ನೀಡಿದ್ದೇವೆ. ಇದಕ್ಕೆ 10 ಸಾವಿರ ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ 90% ಕೇಂದ್ರ ಸರ್ಕಾರ ಹಾಗೂ 10% ರಾಜ್ಯ ಸರ್ಕಾರ ಭರಿಸಲಿದೆ” ಎಂದು ಮಾಹಿತಿ ನೀಡಿದರು.

“ಸುಪ್ರೀಂ ಕೋರ್ಟ್ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಎರಡು ತಿಂಗಳಲ್ಲಿ ಸಲ್ಲಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವರ ಬಳಿ ತಿಳಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇದರ ಸಂಬಂಧ ಈಗಾಗಲೇ ಎರಡು ಬಾರಿ ಸಭೆ ಮುಂದೂಡಲ್ಪಟ್ಟಿದೆ. ಮಹದಾಯಿ ವಿಚಾರವಾಗಿ ಅಧಿಕಾರಿಗಳು ಸಭೆ ಮಾಡಿದ್ದಾರೆ. ಈ ಯೋಜನೆ ವಿಚಾರದಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕುವಂತೆ ಕೇಳಿದ್ದೇವೆ” ಎಂದರು.

“ಕೇಂದ್ರ ಸಚಿವರು ನನಗೆ ಮತ್ತೊಂದು ದಿನ ಭೇಟಿಗೆ ಸಮಯಾವಕಾಶ ನೀಡುತ್ತೇನೆ. ಜಲ ಜೀವನ್ ಮಿಷನ್ ಯೋಜನೆಯಿಂದ ಹಿಡಿದು ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ವಿಚಾರವಾಗಿ ಚರ್ಚೆ ಮಾಡಲು ತಿಳಿಸಿದ್ದಾರೆ” ಎಂದರು.

“ಇನ್ನು ಮಂಗಳವಾರ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಕೆಲವು ಯೋಜನೆಗಳಿಗೆ ಬಾಕಿ ಇರುವ ಅನುಮೋದನೆಗೆ ಮನವಿ ಮಾಡಿದ್ದೇನೆ. ಮೆಟ್ರೋ 2ನೇ ಹಂತದ ಯೋಜನೆಗೆ 15 ವರ್ಷಗಳ ಹಿಂದೆ ಅಂದರೆ 2010ರ ಜುಲೈನಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆಗ 26 ಸಾವಿರ ಕೋಟಿ ಇದ್ದ ಯೋಜನೆ ವೆಚ್ಚ ಈಗ 40 ಸಾವಿರ ಕೋಟಿಗೆ ಏರಿಕೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ 2500 ಕೋಟಿ ಹೆಚ್ಚು ವೆಚ್ಚವಾಗಿದೆ. 2026ರ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳಿಸಲಾಗುವುದು. ಹೀಗಾಗಿ ಈ ಪರಿಷ್ಕೃತ ದರಕ್ಕೆ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

ಕೇಂದ್ರ ಸಚಿವರಿಗೆ ಮೆಟ್ರೋ, ಆರ್ ಆರ್ ಟಿಎಸ್ ಯೋಜನೆಗಳಿಗೆ ಮನವಿ:
“ಮೆಟ್ರೋ 3ಎ ಯೋಜನೆಗೆ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ಒಟ್ಟು 28,405 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ಯೋಜನೆಗೆ 15.01.2025ರಂದು ಕೇಂದ್ರ ಸಚಿವಾಲಯದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅನುಮತಿ ನೀಡಿದರೆ ನಾವು ಕೆಲಸ ಆರಂಭಿಸುತ್ತೇವೆ ಎಂದು ಸಚಿವರಿಗೆ ತಿಳಿಸಿದ್ದೇವೆ. ಇದರ ಪರಿಶೀಲನೆಗೆ ಸಿಸ್ತ್ರ ಎಂಬ ಸಂಸ್ಥೆಗೆ ವಹಿಸಲಾಗಿದೆ. ಅದರ ಶಿಫಾರಸ್ಸಿಗೆ ನಾವು ಬದ್ಧವಾಗಿದ್ದೇವೆ” ಎಂದು ತಿಳಿಸಿದರು.

“ಇನ್ನು ಬೆಂಗಳೂರಿನಲ್ಲಿ ಪ್ರಾದೇಶಿಕ ಕ್ಷಿಪ್ರ ಸಂಚಾರ ವ್ಯವಸ್ಥೆ(RRTS)ಗೆ ಮನವಿ ಮಾಡಲಾಗಿದೆ. ಬಿಡದಿ- ಮೈಸೂರು, ಹಾರೋಹಳ್ಳಿ- ಕನಕಪುರ, ನೆಲಮಂಗಲ- ತುಮಕೂರು, ವಿಮಾನ ನಿಲ್ದಾಣ- ಚಿಕ್ಕಬಳ್ಳಾಪುರ, ಹೊಸಕೋಟೆ- ಕೋಲಾರ ಮಧ್ಯೆ ಈ ಸಂಚಾರ ವ್ಯವಸ್ಥೆ ನಿರ್ಮಿಸಲು ಡಿಪಿಆರ್ ತಯಾರಿಸಲು ಮನವಿ ಮಾಡಿದ್ದೇವೆ. ಬೆಂಗಳೂರಿ ದಟ್ಟಣೆ ಹಾಗೂ ಒತ್ತಡ ಕಡಿಮೆ ಮಾಡಲು ಈ ಭಾಗದಲ್ಲಿ ಸ್ಯಾಟಲೈಟ್ ಟೌನ್ ನಿರ್ಮಿಸಬೇಕು ಎಂದು ಈ ಯೋಜನೆಗೆ ಮನವಿ ಮಾಡಿದ್ದು, ಇದನ್ನು ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಬೆಂಗಳೂರಿಗೆ ಶಕ್ತಿ ತುಂಬದಿದ್ದರೆ ದೇಶಕ್ಕೆ ಅಪಮಾನ ಮಾಡಿದಂತಾಗುತ್ತದೆ. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದೆ ಎಂದು ಮನದಟ್ಟು ಮಾಡಿದ್ದೇನೆ” ಎಂದರು.

ಪ್ರಶ್ನೋತ್ತರ:

ಟನಲ್ ರಸ್ತೆ ರಾಜ್ಯ ಸರ್ಕಾರದ ಯೋಜನೆ:

ಟನಲ್ ರಸ್ತೆ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಕೇಳಿದಾಗ, “ಟನಲ್ ಯೋಜನೆಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಗೆ ಎರಡು ಮೂರು ಸಂಸ್ಥೆಗಳು ಬಿಡ್ ಮಾಡಿವೆ. ಪತ್ರಿಕೆಗಳ ವರದಿಗಳ ಮೂಲಕ ಯಾರು ಹಾಕಿದ್ದಾರೆ ಎಂದು ನೋಡಿದ್ದೇನೆ. ಟನಲ್ ರಸ್ತೆ ಯೋಜನೆಯನ್ನು ಬಿಲ್ಡ್ ಆಪರೇಟ್ ಟ್ರಾನ್ಸ್ ಪೋರ್ಟ್ ಮಾದರಿಯಲ್ಲಿ ಮಾಡಬೇಕಾಗಿದೆ. ಇದು ರಿಸ್ಕ್ ಇರುವ ಯೋಜನೆ ಎಂದು ಗೊತ್ತಿದೆ. ಅವರೇ ಬಂಡವಾಳ ಹಾಕಿ ಈ ಯೋಜನೆ ಮಾಡಬೇಕಿದೆ. ಬ್ಯಾಂಕರ್ ಗಳು ಬಂದು ನಮ್ಮನ್ನು ಮನವಿ ಮಾಡಿದರು. ಅದಕ್ಕೆ ನಾವು ನೀವು ಯಾರಿಗಾದರೂ ಫೈನಾನ್ಸ್ ಮಾಡಿ ಎಂದು ಹೇಳಿದ್ದೇವೆ. ಕೆಲವರಿಗೆ ಗಾಬರಿ ಇದೆ. ಮತ್ತೊಂದು ಕಡೆ ಒಂದೂವರೆ ಕಿಲೋ ಮೀಟರ್ ಟನಲ್ ರಸ್ತೆಗೆ ಮುಂದಾಗಿದ್ದು, ಇದರಿಂದ ಸುಮಾರು 25% ಸಂಚಾರ ದಟ್ಟಣೆ ನಿವಾರಣೆಯಾಗಲಿದೆ” ಎಂದು ತಿಳಿಸಿದರು.

ಗೋದಾವರಿ- ಕಾವೇರಿ ನದಿ ಜೋಡಣೆಯಲ್ಲಿ ಕೇವಲ 15 ಟಿಎಂಸಿ ನೀರನ್ನು ನೀಡುತ್ತಿದ್ದಾರೆ ಎಂದು ಕೇಳಿದಾಗ, “ಈ ಪ್ರಮಾಣ ನಮಗೆ ಸಾಲುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಗೋದಾವರಿ ನದಿ ನಮ್ಮ ರಾಜ್ಯಕ್ಕೆ ಹತ್ತಿರವಿಲ್ಲ. ದೂರವಿದೆ. ಅವರು ನಿಗದಿ ಮಾಡಲಿ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಆಮೇಲೆ ತೀರ್ಮಾನ ಮಾಡೋಣ” ಎಂದರು.

ಈ ನೀರನ್ನು ಕುಡಿಯಲು ಮಾತ್ರ ಬಳಸಲಾಗುವುದೇ ಎಂದು ಕೇಳಿದಾಗ, “ಕುಡಿಯುವ ನೀರು ಹಾಗೂ ನೀರಾವರಿಗೆ ಬಳಸಲಾಗುವುದು” ಎಂದರು.

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ರಾಜ್ಯದ ಜನರಿಗೆ ಉಪಯೋಗವಾಗಲು ಕೇಂದ್ರ ಸರ್ಕಾರ 10 ಸಾವಿರ ಕೋಟಿ ಹಾಕಿ ನಮಗೆ 1 ಸಾವಿರ ಕೋಟಿ ಕೇಳುತ್ತಿರುವಾಗ ನಾವು ಈ ಯೋಜನೆ ಬೇಡ ಎನ್ನಲು ಆಗುತ್ತದೆಯೇ? ಸಮುದ್ರಕ್ಕೆ ಹೋಗುವ ನೀರನ್ನು ಜನರ ಅನುಕೂಲಕ್ಕೆ ಬಳಸಲು ನಮ್ಮ ಉದ್ದೇಶವಾಗಿದೆ” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ವಿಚಾರವಾಗಿ ಕೇಳಿದಾಗ, “ಮೊದಲು ನಾವು ಕೇಂದ್ರ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಪರಿಷ್ಕೃತ ಡಿಪಿಆರ್ ಸಲ್ಲಿಸುತ್ತಿದ್ದೇವೆ. ರಾಮನಗರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕಚೇರಿ ಆರಂಭಿಸಲಾಗುತ್ತಿದೆ. ಅರಣ್ಯ ಇಲಾಖೆಯ ಎಷ್ಟು ಭೂಮಿ ಬೇಕಾಗುತ್ತದೆ. ಅದಕ್ಕೆ ಎಷ್ಟು ಪರ್ಯಾಯ ಭೂಮಿ ನೀಡಬೇಕು ಎಂದೆಲ್ಲಾ ತೀರ್ಮಾನ ಆಗಬೇಕಿದೆ. ಈಗಾಗಲೇ ಪರ್ಯಾಯ ಭೂಮಿಯನ್ನು ಗುರುತಿಸಲಾಗಿದೆ. ಅದೆಲ್ಲವನ್ನು ಮುಗಿಸಿಕೊಂಡು ಹಂತ ಹಂತವಾಗಿ ಮುಂದುವರಿಯುತ್ತೇವೆ. ಇದಕ್ಕೆ ಮಂಡ್ಯ ಅಥವಾ ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಬೇಕು. ಈ ಯೋಜನೆ ತಾಂತ್ರಿಕ ತೀರ್ಮಾನಗಳು ಸಿಡ್ಬ್ಲ್ಯೂಸಿಗೆ ಇರುತ್ತದೆ. ನಾವು ನಮ್ಮ ಪ್ರಸ್ತಾವನೆ ನೀಡುತ್ತೇವೆ. ನಂತರ ಮುಂದಿನ ಪ್ರಕ್ರಿಯೆ ಸಿಡ್ಬ್ಲ್ಯೂಸಿ ನಡೆಸಲಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *