ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಸಾಗರ್ ಹೋಟೆಲ್ ಮಾಲೀಕರಿಗೆ ಪ್ರತಿ ತಿಂಗಳು ಹಣ ನೀಡುವಂತೆ ಪೀಡಿಸುತ್ತಿದ್ದ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೋಟೆಲ್ ಸುಗಮವಾಗಿ ನಡೆಯಬೇಕೆಂದರೆ ತಿಂಗಳಿಗೆ 32 ಸಾವಿರ ರೂಪಾಯಿ ‘ಮಾಮೂಲಿ’ ನೀಡಬೇಕು ಎಂದು ಎಸಿಪಿ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಎಸಿಪಿ ಮತ್ತು ಹೋಟೆಲ್ ಮಾಲೀಕರ ನಡುವೆ ನಡೆದ ಸಂಭಾಷಣೆಯ ಆಡಿಯೋ ತುಣುಕು ಲಭ್ಯವಾಗಿತ್ತು. ಲಂಚ ನೀಡಲು ಇಚ್ಛಿಸದ ಹೋಟೆಲ್ ಮಾಲೀಕರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಪಿಯನ್ನು ಬಂಧಿಸಿದ್ದಾರೆ.
ಹೋಟೆಲ್ ಮಾಲೀಕರ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಎಸಿಪಿ ಕಚೇರಿಯಲ್ಲಿ ಹೋಟೆಲ್ ಮಾಲೀಕರು 30 ಸಾವಿರ ರೂಪಾಯಿ ಕೃಷ್ಣಮೂರ್ತಿಗೆ ನೀಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಹಿಡಿದಿದ್ದಾರೆ.
ಎಸಿಪಿ ಕೃಷ್ಣಮೂರ್ತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಚೇರಿಯಲ್ಲಿದ್ದ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.


