ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಆ ಭಾಗಕ್ಕೆ ಹೊಸದಾಗಿ ಏನೂ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾನು ಎರಡು ಗಂಟೆ, ಐವತ್ತೈದು ನಿಮಿಷ ಮಾತಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಹೊಸ ಘೋಷಣೆ ಮಾಡದೆ ಸಂಪೂರ್ಣ ವಿಫಲರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಹಣ ನೀಡಲು ಏಕೆ ವಿಳಂಬವಾಗಿದೆ ಎಂದು ಸರ್ಕಾರ ಸರಿಯಾಗಿ ತಿಳಿಸಿಲ್ಲ. 1.26 ಕೋಟಿ ಮಹಿಳೆಯರಿಗೆ ಅನ್ಯಾಯ ವಾಗಿದ್ದು, ಇದು ದೊಡ್ಡ ಹಗರಣವಾಗಿದೆ. ಫೆಬ್ರವರಿ ಹಾಗೂ ಮಾರ್ಚ್‌ನ ಹಣ ಏನಾಗಿದೆ ಎಂಬುದನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇನ್ನೂ ಹೇಳಿಲ್ಲ. ಮಹಿಳೆಯರಿಗೆ ಹಣ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ನಾನು ಡ್ರಗ್ಸ್ ಬಗ್ಗೆ ಕೇಳಿದರೆ, ಗೃಹಸಚಿವರು ದೇಶದಲ್ಲಿ ಏನಾಗಿದೆ ಎಂಬುದರ ಬಗ್ಗೆ ಹೇಳುತ್ತಾರೆ. ಡ್ರಗ್ ಮಾಫಿಯಾ ಜೋರಾಗಿದ್ದು, ಬೇರೆ ರಾಜ್ಯಗಳ ಪೊಲೀಸರು ಬಂದು ಇಲ್ಲಿ ಬಂಧನ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಪರಾಧಿ ಚಟುವಟಿಕೆಗಳು ಹೆಚ್ಚಿವೆ. ದ್ವೇಷ ಭಾಷಣ ತಡೆಯಲು ತರಾತುರಿ ಯಲ್ಲಿ ಮಸೂದೆ ತಂದು ವಾಕ್ ಸ್ವಾತಂತ್ರ್ಯ ಕಸಿಯಲಾಗಿದೆ. ಕಾಂಗ್ರೆಸ್ ಈ ಹಿಂದೆ ತುರ್ತು ಪರಿಸ್ಥಿತಿ ಜಾರಿ ಮಾಡಿತ್ತು. ಈಗ ಹೊಸ ಕಾನೂನಿನ ಮೂಲಕ ಕಾಂಗ್ರೆಸ್ ವಿರೋಧ ಪಕ್ಷಗಳನ್ನು, ಮಾಧ್ಯಮಗಳನ್ನು ಟಾರ್ಗೆಟ್ ಮಾಡಿದೆ. ಇದು ವಿರೋಧ ಪಕ್ಷದವರನ್ನು ಜೈಲಿಗೆ ಹಾಕುವ ಕಾನೂನು. ರಾಜ್ಯಪಾಲರು ಬಂದ ಕೂಡಲೇ ಈ ಮಸೂದೆಗೆ ಸಹಿ ಹಾಕಬಾರದು ಎಂದು ಮನವಿ ಮಾಡುತ್ತೇವೆ ಎಂದರು.
ದಲಿತರ ಹಣ ದುರ್ಬಳಕೆ, ರೇಷನ್ ಕಾರ್ಡ್ ರದ್ದು, ವನ್ಯಜೀವಿ ಸಂಘರ್ಷ ಮೊದಲಾದ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಸದನದಲ್ಲಿ ಆಡಳಿತ ಪಕ್ಷದ ಕುರ್ಚಿಗಳು ಖಾಲಿ ಇತ್ತು. ಕಾಂಗ್ರೆಸ್ ಒಡೆದ ಮನೆಯಾಗಿದೆ. ಯಾರು ಸಿಎಂ ಎಂದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್‌ನ ಒಳಜಗಳದಿಂದ ಬೇಸತ್ತಿರುವ ಹೈಕಮಾಂಡ್ ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ ಎಂದಿದೆ. ಅಂದರೆ ಇದು ದುರ್ಬಲವಾದ ನಾಯಕತ್ವ ಎಂದೇ ಅರ್ಥ. ಮಾಜಿ ಸಚಿವ ರಾಜಣ್ಣ ಅವರು ಡಿಕೆಶಿವಕುಮಾರ್ ವಿಫಲ ಎಂದು ಹೇಳಿ ಕೊಳ್ಳಿ ಇಟ್ಟಿದ್ದಾರೆ ಈ ಜಗಳದಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಕೇಂದ್ರ ಸರ್ಕಾರಿ ಯೋಜನೆಗಳನ್ನು ರಾಜ್ಯ ಸರ್ಕಾರ ಮುಂದುವರಿಸುತ್ತಿಲ್ಲ. ಕೇಂದ್ರಕ್ಕೆ ಬಿಲ್ ನೀಡದೆ ಅನುದಾನ ತಡೆಹಿಡಿಯಲಾಗಿದೆ. ರೈಲ್ವೆ, ಕೆರೆ ಮೊದಲಾದವುಗಳಿಗೆ ಭೂಮಿ ನೀಡಿಲ್ಲ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರ ಪ್ರಸ್ತಾವಗಳನ್ನು ತಿರಸ್ಕಾರ ಮಾಡಿದ್ದಾರೆಯೇ ಹೊರತು ಅನುದಾನ ನೀಡುತ್ತೇನೆಂದು ಭರವಸೆ ನೀಡಿಲ್ಲ. ಈ ಸರ್ಕಾರದಿಂದ ಎಂದಿಗೂ ನಿಯೋಗ ಹೋಗಿ ಕೇಂದ್ರದ ಜೊತೆ ಚರ್ಚೆ ಮಾಡಿಯೇ ಇಲ್ಲ. ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಅವಧಿಯಲ್ಲಿ 206 ಕ್ಕೂ ಅಧಿಕ ಆನೆಗಳ ಸಾವಾಗಿದೆ. ಸಿದ್ದರಾಮಯ್ಯನವಗಿಂತ ವೀರಪ್ಪನ್ ಉತ್ತಮ ಎನಿಸುತ್ತದೆ. 61 ಚಿರತೆ, 19 ನವಿಲು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಜಿಂಕೆಗಳು ಸತ್ತಿವೆ. ಜಿಂಕೆ ಮಾಂಸ ಮಾರಾಟವಾಗುತ್ತಿದೆ. ವಿದೇಶದಿಂದ ಹಾವುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯುವ ಬದಲು ಸಫಾರಿ ರದ್ದು ಮಾಡಲಾಗಿದೆ. ಯಾವುದೇ ರಾಜ್ಯ ಗಳಲ್ಲಿ ಸಫಾರಿ ರದ್ದು ಮಾಡಿಲ್ಲ. ಸಫಾರಿಯಿಂದ ವನ್ಯಜೀವಿ ಸಂಘರ್ಷ ಆಗುತ್ತಿಲ್ಲ. ಸಫಾರಿ ಮಾಡುವ ಜಂಗಲ್ ರೆಸಾರ್ಟ್‌ಗಳಲ್ಲಿ 6,000 ಸಿಬ್ಬಂದಿ ಇದ್ದಾರೆ. ಇದರಿಂದಾಗಿ ಪ್ರವಾಸೋದ್ಯಮ ಕುಸಿತವಾಗಿದೆ. ರೈತರು, ಸ್ಥಳೀಯರಿಗೆ ಇದರಿಂದ ನಷ್ಟವಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆತಿದೆ. ಕಾಂಗ್ರೆಸ್‌ನ ದುರಾಡಳಿತಕ್ಕೆ ಈ ಮೂಲಕ ಜನರು ಉತ್ತರ ನೀಡಿದ್ದಾರೆ ಎಂದು ಹೇಳಿದರು.


