ಮೊದಲು ನೀವು ದೇಶಕ್ಕೆ ವಾಪಸಾಗಿ, ನೀವು ಯಾವಾಗ ಭಾರತಕ್ಕೆ ವಾಪಸ್ ಬರಲಿದ್ದೀರಿ ಎಂದು ಭಾರತದ ಬ್ಯಾಂಕ್‌ಗಳಿಗೆ ಬಹುಕೋಟಿ ವಂಚನೆ ಮಾಡಿ ದೇಶದಿಂದ ಪಲಾಯನವಾಗಿರುವ ವಿವಾದಿತ ಉದ್ಯಮಿ ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಮಲ್ಯ ಖುದ್ದು ಹಾಜರಾಗುವವರೆಗೂ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ವಿರುದ್ಧದ ನಿಮ್ಮ ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ಮಲ್ಯ ಪರ ವಕೀಲರಿಗೆ ಕೋರ್ಟ್ ತಿಳಿಸಿದೆ.
2016ರಿಂದ ಲಂಡನ್‌ನಲ್ಲಿ ವಾಸವಿರುವ ಮಲ್ಯ ತಮ್ಮನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಆದೇಶ ಮತ್ತು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ
ಎರಡು ಅರ್ಜಿ ಸಲ್ಲಿಸಿದ್ದಾರೆ.
ವಂಚನೆ ಮತ್ತು ಹಣ ವರ್ಗಾವಣೆ ಆರೋಪವನ್ನು ಹೊತ್ತಿರುವ ವಿಜಯ್ ಮಲ್ಯ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ಪೀಠವು ಪರಿಶೀಲಿಸಿದೆ. ಮಲ್ಯ ಪರ ವಕೀಲ ಅಮಿತ್ ದೇಸಾಯಿಯವರಲ್ಲಿ ಮಲ್ಯ ಯಾವಾಗ ಭಾರತಕ್ಕೆ ಮರಳುವುದು ಎಂದು ಪ್ರಶ್ನಿಸಿದೆ. 2026ರ ಫೆಬ್ರವರಿ 11ರ ಒಳಗೆ ಯಾವಾಗ ಭಾರತಕ್ಕೆ ಮರಳುತ್ತಾರೆ ಎಂಬುದರ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯಾವುದೇ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲು ದೇಶದಿಂದ ಪರಾರಿಯಾದವರಿಗೆ ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ. ದೇಶದಿಂದ ದೂರ ಉಳಿದು ವಕೀಲರ ಮೂಲಕ ಅರ್ಜಿಗಳನ್ನು ಸಲ್ಲಿಸುವ ವ್ಯಕ್ತಿಗಳು ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು ಎಫ್‌ಇಒ ಕಾಯ್ದೆಯನ್ನು ತರಲಾಗಿದೆ ಎಂದರು.
2005ರಲ್ಲಿ ಮಲ್ಯ ಪ್ರಾರಂಭಿಸಿದ ಕಿಂಗ್‌ಫಿಶರ್ ಏರ್‌ಲೈನ್ಸ್ ಕಾರ್ಯಾಚರಣೆ 2012ರಲ್ಲಿ ಸ್ಥಗಿತಗೊಂಡಿತು. ದೇಶದ ಬ್ಯಾಂಕ್‌ಗಳಿಂದ ಪಡೆದಿದ್ದ 9,000 ಕೋಟಿ ರೂಪಾಯಿ ಮರುಪಾವತಿ ಮಾಡದೆ ದೇಶ ಬಿಟ್ಟು ಪರಾರಿಯಾಗಿ ಭಾರತದ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಗುರುತಿಸಿಕೊಂಡಿದ್ದಾರೆ.


