Wednesday, December 24, 2025
Menu

ಮೋದಿ ಸರ್ಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ನರೇಗಾ ಯೋಜನೆ ವಿಫಲ: ಡಿಕೆ ಶಿವಕುಮಾರ್‌ ಕಳವಳ

“ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ನರೇಗಾ ಯೋಜನೆ ವಿಫಲವಾಗಲಿದೆ.  ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮನರೇಗಾ ಯೋಜನೆ ಹೆಸರು ಬದಲಾವಣೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಸರ್ಕಾರ ಮನರೇಗಾ ಯೋಜನೆಯನ್ನು ಸಂವಿಧಾನ ಬದ್ಧವಾಗಿ ಜಾರಿಗೆ ತಂದಿತ್ತು. ಉದ್ಯೋಗ ಖಾತರಿಯನ್ನು ಸಂವಿಧಾನಿಕ ಹಕ್ಕಾಗಿ ನೀಡಿತ್ತು” ಎಂದು ಹೇಳಿದರು.

“ಮಹಾತ್ಮಾ ಗಾಂಧಿ ಅವರ ಹೆಸರು ಬದಲಾವಣೆ ಮಾಡುತ್ತಿರುವುದು ನೋಡಿದರೆ ಕೇಂದ್ರ ಸರ್ಕಾರದ ಅಂತಿಮ ದಿನಗಳ ಆರಂಭ ಎನ್ನಬಹುದು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡುತ್ತಿದೆ. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುಪಾತವನ್ನು 60:40ಕ್ಕೆ ಬದಲಾಯಿಸಿದ್ದು, ಬಿಜೆಪಿ ಆಡಳಿತ ರಾಜ್ಯ ಸರ್ಕಾರಗಳು ಸೇರಿದಂತೆ ಯಾವುದೇ ರಾಜ್ಯ ಸರ್ಕಾರಗಳು ಇದನ್ನು ಭರಿಸುವುದಿಲ್ಲ. ಇದರಿಂದಾಗಿ ಭವಿಷ್ಯದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗಲಿದೆ” ಎಂದರು.

ವಿಜಯ್ ಹಜಾರೆ ಟ್ರೋಫಿಗೆ ಅನುಮತಿ ನಿರಾಕರಣೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ಪೊಲೀಸರ ಅನುಮತಿ ನಿರಾಕರಣೆ ಬಗ್ಗೆ ಕೇಳಿದಾಗ, “ನನಗೆ ಆ ವಿಚಾರ ಗೊತ್ತಿಲ್ಲ. ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಬೇಕು, ಗೌರವ ಉಳಿಯಬೇಕು ಎಂದು ಬಯಸುವವನು ನಾನು. ಮುಂದೆ ಮತ್ತೆ ಅನಾಹುತ ಆಗದಂತೆ ನೋಡಿಕೊಳ್ಳಲು ಯಾವ ಮಾನದಂಡ ನಿಗದಿ ಮಾಡಬಹುದು ಎಂದು ಚರ್ಚಿಸ ಲಾಗುವುದು” ಎಂದರು.

“ಈ ವಿಚಾರವಾಗಿ ಗೃಹ ಸಚಿವರಿಗೆ ಜವಾಬ್ದಾರಿ ನೀಡಲಾಗಿದ್ದು, ಅವರೊಂದಿಗೆ ಚರ್ಚೆ ಮಾಡುತ್ತೇನೆ. ಅವರು ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರಾಗಿದ್ದವರು, ಅವರಿಗೂ ಅನುಭವವಿದೆ” ಎಂದು ತಿಳಿಸಿದರು.

ಪ್ರಿಯಾಂಕ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ರಾಜಕೀಯ ವಿಚಾರಕ್ಕೆ ದೆಹಲಿಗೆ ಆಗಮಿಸಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಬೆಂಗಳೂರಿನ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಇದರ ಹೊರತಾಗಿ ರಾಜಕೀಯ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.

Related Posts

Leave a Reply

Your email address will not be published. Required fields are marked *