ಅಮೆರಿಕದ ದೊಡ್ಡಣ್ಣ ಟ್ರಂಪ್ ಸುಂಕ ಸಮರ ಸಾರಿದ ಮೇಲೆ ಭಾರತ ವ್ಯಾಪಾರ ಸಂಬಂಧದ ನೀತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಈಗ ನ್ಯೂಜಿಲೆಂಡ್, ಒಮನ್, ಯುಕೆ ಜತೆ ನೇರ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.
ಈ ದೇಶಗಳಲ್ಲಿ ಭಾರತದ ಸರಕುಗಳಿಗೆ ತೆರಿಗೆ ಇರುವುದಿಲ್ಲ. ಅದೇ ರೀತಿ ಅಲ್ಲಿಯ ಸರಕುಗಳು ನಮಗೆ ಮುಕ್ತವಾಗಿ ದೊರಕಲಿದೆ. ಇದರಿಂದ ಅನುಕೂಲ ಎಂದರೆ ಹಲವು ಕಾರಣಗಳಿಂದ ಜಗತ್ತಿನಲ್ಲಿ ಹಲವು ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿರುತ್ತವೆ. ಆಗ ನೇರ ವ್ಯಾಪಾರ ಒಪ್ಪಂದ ಇದಲ್ಲಿ ಅದಕ್ಕೆ ದಿಗ್ಬಂಧನ ಅನ್ವಯಿಸುವುದಿಲ್ಲ. ಹೀಗಾಗಿ ಅಗತ್ಯ ವಸ್ತುಗಳನ್ನು ನಿರಂತರ ಪಡೆಯಲು ಅವಕಾಶ ಸಿಗುತ್ತದೆ.
ಇತ್ತೀಚೆಗೆ ಅಮೆರಿಕ ಮತ್ತು ನ್ಯಾಟೊ ದೇಶಗಳು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದವು. ಉಕ್ರೇನ್ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರಲು ಈ ಕ್ರಮ ಕೈಗೊಂಡವು. ಆದರೆ ಭಾರತ ಇದನ್ನು ಪಾಲಿಸಲಿಲ್ಲ. ಏಕೆಂದರೆ ರಷ್ಯಾದೊಂದಿಗೆ ಕಚ್ಚಾ ತೈಲ ಖರೀದಿ ನೇರ ಮುಕ್ತ ವ್ಯಾಪಾರ ಒಪ್ಪಂದವಿತ್ತು. ಅದರಂತೆ ಭಾರತ ಅಮೆರಿಕದ ವಿರೋಧದ ನಡುವೆ ರಷ್ಯಾ ದಿಂದ ಕಚ್ಚಾತೈಲವನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆದು ಅದನ್ನು ಸಂಸ್ಕರಿಸಿ ಶುದ್ಧ ತೈಲವನ್ನು ನೇರ ವ್ಯಾಪಾರ ಒಪ್ಪಂದ ವಿದ್ದ ದೇಶಗಳಿಗೆ ಮಾರಾಟ ಮಾಡಿತು. ಇದಕ್ಕೆ ವಿರೋಧ ಕಂಡು ಬಂದರೂ ಅಮೆರಿಕಕ್ಕೆ ದುಬಾರಿ ಸುಂಕ ವಿಧಿಸುವುದನ್ನು ಹೊರತುಪಡಿಸಿದರೆ ಮತ್ತೇನೂ ಮಾಡಲು ಸಾಧ್ಯವಾಗಲಿಲ್ಲ.
ಈಗ ಭಾರತ ಒಟ್ಟು ೫೦ ದೇಶಗಳೊಂದಿಗೆ ನೇರ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಡಾಲರ್ ಬಿಟ್ಟು ಆಯಾ ದೇಶಗಳ ಹಣದ ಮೂಲಕ ವ್ಯಾಪಾರ ಮಾಡಲು ಅವಕಾಶ ಸಿಕ್ಕಿದೆ. ಇದು ಎರಡೂ ದೇಶಗಳಿಗೂ ಲಾಭ. ಎರಡೂ ದೇಶಗಳ ನಾಣ್ಯ ಹೆಚ್ಚು ಮೌಲ್ಯ ಪಡೆಯಲು ಸಹಕಾರಿಯಾಗಿದೆ. ರಷ್ಯಾ ಮತ್ತು ಭಾರತ ಈಗ ನೇರವಾಗಿ ತಮ್ಮ ತಮ್ಮ ನಾಣ್ಯಗಳ ಮೂಲಕ ವ್ಯಾಪಾರ ನಡೆಸಲು ಆರಂಭಿಸಿದೆ.
ರಷ್ಯಾ-ಚೀನಾ-ಭಾರತ ತಮ್ಮ ತಮ್ಮ ನಾಣ್ಯಗಳ ಮೂಲಕ ತಮ್ಮ ವ್ಯಾಪಾರ ಸಂಬಂಧ ಉತ್ತಮಪಡಿಸಿಕೊಳ್ಳುವುದರಲ್ಲಿ ನಿರತವಾಗಿವೆ. ಆದರೂ ನಿಷೇಧ ವಿಧಿಸಿದ ದೇಶಗಳು ಕಂಪನಿಗಳ ಮೇಲೂ ತನ್ನ ನಿಷೇಧ ಹೇರಬಹುದು. ಇದರಿಂದ ಕೆಲವು ಕಂಪನಿಗಳು ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಇದನ್ನು ತಡೆಗಟ್ಟಲು ಈಗ ಅವಕಾಶ ಇಲ್ಲ. ಕೆಲವು ಅಗತ್ಯ ವಸ್ತುಗಳ ಸರಬರಾಜು ಸರಣಿ ಮುಂದುವರಿಯುವುದು ಅಗತ್ಯ. ಸಾಮಾನ್ಯವಾಗಿ ಹಡಗುಗಳ ಮೂಲಕ ಅಗತ್ಯ ವಸ್ತುಗಳನ್ನು ಕೆಲವು ದೇಶಗಳು ಒಟ್ಟಿಗೆ ಪಡೆಯುತ್ತವೆ ಇದರಿಂದ ಸರಬರಾಜು ವೆಚ್ಚ ಕಡಿಮೆಯಾಗುತ್ತದೆ. ಅಲ್ಲದೆ ಸರಕುಗಳ ಗುಣಮಟ್ಟ ಪರೀಕ್ಷಿಸುವುದು ಇದರಿಂದ ಸಾಧ್ಯ. ಭಾರತ ಮೊದಲಿನಿಂದಲೂ ಯುದ್ಧದ ಕಾಲದಲ್ಲಿ ಅಗತ್ಯವಸ್ತುಗಳ ಸರಬರಾಜಿಗೆ ಅಡ್ಡಿ ಇರಬಾರದು ಎಂದು ಹೇಳುತ್ತ ಬಂದಿದೆ. ಹಿಂದೆ ಎಲ್ಲ ದೇಶಗಳು ಇದಕ್ಕೆ ಒಪ್ಪಿರಲಿಲ್ಲ. ಈಗ ಭಾರತದ ನಿಲುವಿನ ನೈಜತೆ ಅರಿವು ಇತರ ದೇಶಗಳಿಗೆ ತಿಳಿಯುತ್ತಿದೆ. ಅದರಿಂದ ಭಾರತದೊಂದಿಗೆ ನೇರ ಒಪ್ಪಂದ ಮಾಡಿಕೊಳ್ಳಲು ಹಲವು ದೇಶ ಗಳು ತುದಿಗಾಲಲ್ಲಿ ನಿಂತಿವೆ.
ಆರ್ಥಿಕ ದಿಗ್ಬಂಧನ ಮತ್ತು ಸುಂಕ ಸಮರ ಉತ್ತಮ ಫಲಿತಾಂಶ ನೀಡುವುದಿಲ್ಲ ಎಂಬುದು ಎಲ್ಲ ದೇಶಗಳ ಗಮನಕ್ಕೆ ಬಂದಿವೆ. ಅದರಿಂದ ಈಗ ಯುದ್ಧವನ್ನು ನೋಡುವ ರೀತಿ ಬದಲಾಗಿದೆ. ಭಾರತದ ಮಾತಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಬಂದಿದೆ. ಭಾರತದ ಆರ್ಥಿಕ ಬೆಳವಣಿಗೆ ಎಲ್ಲ ದೇಶಗಳನ್ನು ಆಕರ್ಷಿಸುತ್ತಿದೆ. ಹೀಗಾಗಿ ಎಲ್ಲ ದೇಶಗಳು ನೇರ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ. ಇದರಿಂದ ಭಾರತ ಸರಕುಗಳಿಗೆ ವಿಶ್ವ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಿದೆ. ಭಾರತದ ಎಲ್ಲ ಸರಕುಗಳಿಗೆ ಮಾರುಕಟ್ಟೆ ಸೃಷ್ಟಿಯಾಗಿರುವುದು ಉದ್ಯಮಿಗಳಲ್ಲಿ ಸಂತಸ ಮೂಡಿಸಿದೆ.


