ಬೆಂಗಳೂರು: ಮಗು ಅತ್ತರೆ ಯಾರು ಸಮಾಧಾನ ಮಾಡಬೇಕು? ತಂದೆ – ತಾಯಿ, ಪೋಷಕರು ಸಮಾಧಾನ ಮಾಡಬೇಕು. ಇಲ್ಲಿ ಕೂಡ ಏನೇ ಸಮಸ್ಯೆ ಇದ್ರೂ ಹೈಕಮಾಂಡ್ ಗಮನಿಸುತ್ತದೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪತ್ರದ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಕೆ.ಎನ್. ರಾಜಣ್ಣ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪತ್ರದ ಬಗ್ಗೆ ಅವರನ್ನೇ ಕೇಳಬೇಕು. ಪಕ್ಷದ ವರಿಷ್ಠರನ್ನು ಭೇಟಿ ಮಾಡೋದು ಅವರವರ ಹಕ್ಕು. ಅವರ ಪ್ರತಿಪಾದನೆ, ಅವರ ವಿಚಾರ. ಅದರ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಹೈಕಮಾಂಡ್ ಗಮನಿಸುತ್ತಿರುತ್ತದೆ. ನಮ್ಮ ಪಕ್ಷದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಹಾಗಾಗಿಯೇ ಅವರು ಆ ಮಾತನ್ನು ಹೇಳಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ಸಾಮಾನ್ಯವಾಗಿ ದೆಹಲಿಗೆ ಹೋಗ್ತಾರೆ. ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗ್ತಾರೆ. ಸಚಿವ ಪ್ರಿಯಾಂಕ್ ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾಗ್ತಾರೆ ಎಂದು ತಿಳಿಸಿದರು.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಖರ್ಗೆಯವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ ಹೇಳಿದಂತೆ ಕೇಳ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಶಾಂತವಾಗಿದೆ. ಎಲ್ಲರಿಗೂ ಉತ್ತಮ ವಾತಾವರಣವಿರುವ ರಾಜ್ಯ. ಹೆಚ್ ಡಿ ಕುಮಾರಸ್ವಾಮಿ ಕೇಂದ್ರದ ಮಂತ್ರಿಗಳು. ಇಲ್ಲಿ ಸಲಹೆ ಮಾಡುವ ಬದಲು ಮೋದಿಗೆ ಸಲಹೆ ಕೊಡಲಿ. ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಲಿ. ಕೇಂದ್ರದವರು ವೋಟ್ ತೆಗೆದಿದ್ದಾರೆ, ನೋಟು ತೆಗಿತಾರೆ. ಮೋದಿ ಅವರು ನಿರುದ್ಯೋಗದ ಬಗ್ಗೆ ಚರ್ಚೆ ಮಾಡಲ್ಲ. ಡಾಲರ್ ವಿರುದ್ಧ 56 ರೂಪಾಯಿ ಇದ್ದ ಬೆಲೆ ಈಗ 91ರೂ. ಆಗಿದೆ. ಜನರಿಗೆ ಇದರ ಪರಿಣಾಮದ ಬಗ್ಗೆ ಬಿಚ್ಚಿ ಹೇಳಬೇಕು. ಕಾಂಗ್ರೆಸ್ ನವರ ಹುಳುಕು ಹೇಳಿ ಕಾಲ ಕಳೆಯಬೇಡಿ. ಗಾಂಧಿ, ನೆಹರು ಹೆಸರು ಎಲ್ಲಿದೆ ಎಂದು ಹುಡುಕ್ತಾರೆ. ಇವರ ಕಾಲದಲ್ಲಿ ಯಾವ ಹೆಸರು ಬೇಕೋ ಅದನ್ನು ಇಡ್ತಾರೆ. ದೇಶದ ಜನರಿಗೆ ಆರ್ಥವಾಗುವ ದಿನ ಹತ್ತಿರ ಬರುತ್ತಿದೆ ಎಂದು ಡಿ ಕೆ ಸುರೇಶ್ ಹೇಳಿದ್ರು.


