Tuesday, December 23, 2025
Menu

ಗರ್ಭಿಣಿ ಆತ್ಮಹತ್ಯೆ, ದಲಿತೆಯೆಂದು ಗಂಡನ ಮನೆಯವರಿಂದ ಕೊಲೆ: ಕುಟುಂಬ ಆರೋಪ

ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಜಾತಿ ದ್ವೇಷದಿಂದ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಗರ್ಭಿಣಿ ನೇಣುಬಿಗುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ, ಜಾತಿ ದ್ವೇಷದ ಹಿನ್ನೆಲೆಯಲ್ಲಿ ಆಕೆಯ ಗಂಡನ ಮನೆಯವರು ಮಾಡಿದ ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.

ಮೃತಪಟ್ಟ ಮಹಿಳೆಯನ್ನು ಪುಷ್ಪಾ (25) ಎಂದು ಗುರುತಿಸಲಾಗಿದೆ. ಮಾದಿಗ ಸಮಾಜಕ್ಕೆ ಸೇರಿದ ಪುಷ್ಪ ಮತ್ತು ಬಂಜಾರ ಸಮಾಜದ ಹರೀಶ್ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕುಟುಂಬಗಳಲ್ಲಿ ಒಪ್ಪಿಗೆ ಇರಲಿಲ್ಲ. ದಂಪತಿಗೆ ಈಗಾಗಲೇ ಒಂದೂವರೆ ವರ್ಷದ ಮಗುವಿದ್ದು, ಪುಷ್ಪಾ ಎರಡನೇ ಬಾರಿ ಗರ್ಭಿಣಿಯಾಗಿದ್ದರು.

ಪತಿ ಹರೀಶ್‌ ಮತ್ತು ಆತನ ಕುಟುಂಬದವರ ಮೇಲೆ ಮೃತ ಪುಷ್ಪಾಳ ಮನೆಯವರು ಕೊಲೆ ಆರೋಪ ಮಾಡಿದ್ದಾರೆ. ‘ಜಾತಿ ಕಾರಣಕ್ಕಾಗಿ ಹರೀಶ್ ಕುಟುಂಬದವರು ಪುಷ್ಪಾಳನ್ನು ಮೊದಲಿನಿಂದಲೂ ದ್ವೇಷಿಸುತ್ತಿದ್ದರು. ಮದುವೆಯಾದ ನಂತರವೂ ಆಕೆಯನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ದನದ ಕೊಟ್ಟಿಗೆಯಲ್ಲಿ ವಾಸಿಸುವಂತೆ ಚಿತ್ರಹಿಂಸೆ ನೀಡುತ್ತಿದ್ದರು. ಅವರೇ ಕೊಲೆ ಮಾಡಿ ಆತ್ಮಹತ್ಯೆಯಂತೆ ಬಿಂಬಿಸಲು ನೇಣು ಹಾಕಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

ಮನೆಯಲ್ಲಿ ಪುಷ್ಪಾ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಸು ನೀಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಪೋಷಕರ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೊನ್ನೆಯಷ್ಟೇ  ದಲಿತನ ಮದುವೆಯಾಗಿದ್ದ ಕಾರಣಕ್ಕೆ ಗರ್ಭಿಣಿ ಮಗಳನ್ನೇ ತಂದೆ ಹತ್ಯೆ ಮಾಡಿರುವುದು ವರದಿಯಾಗಿತ್ತು.

 

Related Posts

Leave a Reply

Your email address will not be published. Required fields are marked *