ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯವನ್ನು ತನಿಖೆಯಲ್ಲಿ ಭಾಗವಹಿಸಿದ್ದ ಶ್ವಾನದಳದ ನಾಯಿಗಳು ಬಯಲು ಮಾಡಿವೆ. ಆಂಧ್ರದ ವಿಜಯನಗರ ಭೋಗಾಪುರಂ ಮಂಡಲದ ಮುಡಸಲಪೇಟೆ ವಿಮಾನ ನಿಲ್ದಾಣ ಕಾಲೊನಿಯಲ್ಲಿ ನಡೆದ ವೃದ್ಧ ಮಹಿಳೆಯ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯಾಗಿರುವ ಮೊಮ್ಮಗನನ್ನು ಬಂಧಿಸಿದ್ದಾರೆ.
ಚಿನ್ನಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಿದ್ದ ಮೊಮ್ಮಗನಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ಮಹಿಳೆಯ ಸೊಸೆ ಲಕ್ಷ್ಮಿ ಭೋಗಪುರಂ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆಂದು ದೂರು ದಾಖಲಿಸಿದ್ದರು.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ಶ್ವಾನ ದಳ ಸ್ಥಳವನ್ನು ಪರಿಶೀಲಿಸಿ ಕೊಲೆಯಾದ ಮಹಿಳೆಯ ಮೊಮ್ಮಗನ ಸುತ್ತ ಸುತ್ತುತ್ತಿತ್ತು. ಇದರಿಂದ ಪೊಲೀಸರಿಗೆ ಅವನ ಮೇಲೆ ಅನುಮಾನ ಉಂಆಗಿ ವಿಚಾರಣೆ ತೀವ್ರಗೊಳಿಸಿದಾಗ ಸತ್ಯ ಹೊರ ಬಂದಿದೆ.
ಕೊಲೆ ಮಾಡಿದ ಕೆಲವು ದಿನಗಳು ಕಳೆದ ಕದ್ದ ಚಿನ್ನವನ್ನು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. 18.250 ಗ್ರಾಂ ಚಿನ್ನದ ಆಭರಣ ಮತ್ತು 106 ಗ್ರಾಂ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಅಜ್ಜಿ ತನ್ನ ಮಗಳು ಮತ್ತು ಕಿರಿಯ ಮಗನಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಳು. ಹಿರಿಯ ಮಗನ ಕುಟುಂಬಕ್ಕೆ ಹಣ ನೀಡಿರಲಿಲ್ಲ. ಇದರಿಂದ ಹಿರಿಯ ಮಗನ ಮಗ ಅಂದರೆ ಮೊಮ್ಮಗ ಅಜ್ಜಿಯೊಂದಿಗೆ ಜಗಳವಾಡುತ್ತಿದ್ದ. ಕುಡಿದ ಅಮಲಿನಲ್ಲಿದ್ದ ಆತ ಬೈಕ್ ಫೈನಾನ್ಸ್‌ಗೆ ಹಣ ಕೇಳಿದಾಗ ಅಜ್ಜಿ ಕೊಡಲಿಲ್ಲ. ಕೋಪಗೊಂಡ ಆತ ಹೊಡೆದು ಕೊಲೆ ಮಾಡಿದ್ದ.
ದರೋಡೆಯೆಂದು ಎಲ್ಲರನ್ನೂ ನಂಬಿಸಲು ಅಜ್ಜಿಯ ದೇಹದ ಮೇಲಿದ್ದ ಚಿನ್ನ ಮತ್ತು ಬೆಳ್ಳಿ ತೆಗೆದುಕೊಂಡು ಅಪರಿಚಿತ ವ್ಯಕ್ತಿಗಳಿಂದ ಕೊಲೆಯಾಗಿರುವಂತೆ ನಂಬಿಸಲು ಶವವನ್ನು ಕಾಲುವೆ ಬಳಿ ಎಸೆದಿದ್ದ. ನಂತರ, ಏನೂ ತಿಳಿಯದವನಂತೆ ನಟಿಸಿ ಎಲ್ಲರಿಗೂ ವಿಷಯ ಗೊತ್ತಾದ ನಂತರ ಅಳುತ್ತಾ ಕುಳಿತಿದ್ದ. ಶ್ವಾನ ದಳ ನಾಯಿಗಳು ಆತನ ಸುತ್ತಲೇ ಸುತ್ತುತ್ತಿದ್ದ ಕಾರಣ ಕೃತ್ಯ ಬಯಲಾಗಿದೆ.


