Tuesday, December 23, 2025
Menu

ಆರ್‌ಎಸ್‌ಎಸ್‌ಗೆ ರಾಜಕೀಯ ಅಸ್ತಿತ್ವವಿಲ್ಲ ನಿಜ, ರಾಜಕೀಯ ನಂಟಿಲ್ಲವೇ?

ಈ ದೇಶದಲ್ಲಿ ಧಾರ್ಮಿಕ ಮಠಗಳೂ ಕೂಡಾ ರಾಜಕೀಯೇತರ ಸಂಘಟನೆಗಳಾಗಿಯೇ ಚಲಾವಣೆಯಾಗಿರುವುದು ಕಟುವಾಸ್ತವ. ಹಾಗೆಂದ ಮಾತ್ರಕ್ಕೆ ಆರ್‌ಎಸ್‌ಎಸ್ ಅಂತಹ ರಾಜಕೀಯೇತರ ಸಂಘಟನೆ ಈ ದೇಶದ ಪ್ರಸಕ್ತ ರಾಜಕೀಯ ಆಗುಹೋಗುಗಳು ಮತ್ತು ರಾಜಕಾರಣದ ನೆಲೆಗಟ್ಟಿನಿಂದ ಸಂಪೂರ್ಣವಾಗಿ ದೂರ ಉಳಿದಿದೆಯೇ?

ಆರ್‌ಎಸ್‌ಎಸ್‌ಗೆ ಯಾರೂ ರಾಜಕೀಯವಾಗಿ ಶತ್ರುಗಳಿಲ್ಲ ಎಂದು ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಹೇಳಿರುವುದು ಗಮನಾರ್ಹ. ಸಂಘ ಪರಿವಾರ ಮತ್ತು ಇದರಿಂದ ದೂರವಿರುವ ದೇಶದ ಕೆಲ ಸಂಘಟನೆಗಳ ನಡುವೆ ಸೈದ್ದಾಂತಿಕ ಭಿನ್ನಭಿಪ್ರಾಯಗಳು ಮತ್ತು ಚರ್ಚೆ ಸಾಮಾನ್ಯ. ಇದು ಆರ್‌ಎಸ್‌ಎಸ್ ಜನ್ಮತಾಳಿದ ಲಾಗಾಯ್ತಿನಿಂದಲೂ ಮುಂದುವರಿದಿದೆ. ಅದೇನೇ ಇರಲಿ. ಆರ್‌ಎಸ್‌ಎಸ್ ಮತ್ತು ಈ ಸಂಘಟನೆಯ ನಡೆ, ನುಡಿ ಮತ್ತು ಆಚರಣೆ ಹಾಗೂ ನೀತಿ ಹಲವು ಹತ್ತು ಆಯಾಮಗಳಲ್ಲಿ ಚರ್ಚೆಯಲ್ಲಿರುವುದಂತೂ ನಿಜ. ಸಂಘ ಪರಿವಾರಕ್ಕೆ ರಾಜಕೀಯ ಅಸ್ತಿತ್ವವಿಲ್ಲ. ನಿಜ.

ದೇಶದ ಪ್ರಮುಖ ಹಿಂದು ಸಂಘಟನೆಯಾಗಿ ನೋಂದಣಿಯನ್ನೇ ಪಡೆಯಲು ಅಪೇಕ್ಷಿಸದ ಆರ್ ಎಸ್ ಎಸ್‌ಗೆ ಯಾವುದೇ ರೀತಿಯಲ್ಲಿ ರಾಜಕೀಯ ಮತ್ತು ರಾಜಕಾರಣದ ಗಾಳಿ ಸೋಕಬಾರದು. ಆದರೆ ಇದು ವಾಸ್ತವದಲ್ಲಿ ನಿಜವೇ? ಈ ರೀತಿಯಾಗಿ ಸಂಘ ಪರಿವಾರ ಅಪ್ಪಟ ರಾಜಕೀಯೇತರ ಸಂಘಟನೆಯಾಗಿರಲು ಸಾಧ್ಯವೇ? ವಸುದೈವ ಕುಟುಂಬಕಂ ಎಂಬ ಮಂತ್ರವನ್ನು ಸದಾ ಜಪಿಸುವ ಈ ಸಂಘಟನೆ ದೇಶದಲ್ಲಿರುವ ಎಲ್ಲರನ್ನೂ, ಎಲ್ಲ ಸಮುದಾಯ ಮತ್ತು ಜಾತಿಗಳನ್ನು ಒಂದೇ ದೃಷ್ಟಿಯಲ್ಲಿ ನೋಡುವುದೇ ಎಂಬ ಪ್ರಶ್ನೆಗಳೂ ಇಂದು ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿವೆ. ದೇಶದ ಸ್ವರಾಜ್ಯ ಗಳಿಕೆಗಾಗಿ ಇಂಗ್ಲಿಷರ ಆಡಳಿತದ ಅವಧಿಯಲ್ಲಿ ಜನ್ಮ ತಾಳಿದ ಕಾಂಗ್ರೆಸ್ ಮತ್ತು ತದನಂತರ ಹುಟ್ಟಿಕೊಂಡ ಆರ್‌ಎಸ್‌ಎಸ್, ಸ್ವರಾಜ್ಯ ಗಳಿಕೆ ವಿಚಾರ ದಲ್ಲಿ ಈಗಲೂ ಸಂಘರ್ಷದ ಹಾದಿಯಲ್ಲಿದೆ.

ಆರ್ ಎಸ್ ಎಸ್ ಎಂದೂ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಲಿಲ್ಲ ಎಂಬುದು ಕಾಂಗ್ರೆಸ್ ನಾಯಕರ ವಾದ. ಆದರೆ ಕಾಂಗ್ರೆಸ್ ಸ್ವರಾಜ್ಯ ಸಂಗ್ರಾಮಕ್ಕೆ ಸಾರಥ್ಯ ವಹಿಸಿದ ಮಾತ್ರಕ್ಕೆ ಇದರ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ದಕ್ಕಿಸಿಕೊಳ್ಳುವುದನ್ನು ಒಪ್ಪಲಾಗದು ಎಂಬುದು ಕಟ್ಟಾ ಸಂಘ ಪರಿವಾರ ಬೆಂಬಲಿಗರ ಬಿಗಿವಾದ. ಒಟ್ಟಿನಲ್ಲಿ ಈ ದೇಶದಲ್ಲಿ ನೇರವಾಗಿ ರಾಜಕೀಯ ನಂಟು ಹೊಂದಿಲ್ಲದಂತಹ ಧಾರ್ಮಿಕ ಸಂಘಟನೆಗಳೂ ನೂರಾರು. ತಮ್ಮ ಧಾರ್ಮಿಕ ಚೌಕಟ್ಟಿನಲ್ಲಿ ಈ ದೇಶದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಪರಂಪರೆ ಮುಂದುವರಿಸಿವೆ ಎಂದೆನ್ನುವ ಧಾರ್ಮಿಕ ಮಠಗಳೂ ಕೂಡಾ ರಾಜಕೀಯೇತರ ಸಂಘಟನೆಗಳಾಗಿಯೇ ಚಲಾವಣೆಯಾಗಿರುವುದು ಕಟುವಾಸ್ತವ. ಹಾಗೆಂದ ಮಾತ್ರಕ್ಕೆ ಆರ್ ಎಸ್ ಎಸ್ ಅಂತಹ ರಾಜಕೀಯೇತರ ಸಂಘಟನೆ ಸಂಪೂರ್ಣವಾಗಿ ಈ ದೇಶದ ಪ್ರಸಕ್ತ ರಾಜಕೀಯ ಆಗು ಹೋಗುಗಳು ಮತ್ತು ರಾಜಕಾರಣದ ನೆಲೆಗಟ್ಟಿನಿಂದ ದೂರ ಉಳಿದಿದೆಯೇ?

ಎಲ್ಲಿಯವರೆಗೆ ಈ ದೇಶದ ಜನತೆ ಯಾವುದನ್ನು ನಂಬಿರುವರೋ ಮತ್ತು ಯಾವ್ಯಾವ ಆಚರಣೆ ಮತ್ತು ಸಂಪ್ರದಾಯ, ಧಾರ್ಮಿಕ ಶ್ರದ್ದೆ ಹೊಂದಿರುವವರೋ ಅದರಿಂದ ದೂರವಿದ್ದು ಧಾರ್ಮಿಕ ಸಂಘಟನೆಗಳಾಗಲೀ ಅಥವಾ ಇನ್ನಾವುದೇ ಸಂಘಟನೆ ಯಾಗಲಿ ರಾಜಕೀಯ ವ್ಯವಸ್ಥೆಯಿಂದ ದೂರವಿರಲು ಸಾಧ್ಯವಿಲ್ಲ. ಭಾರತದಂತಹ ವಿಭಿನ್ನ ಸಂಸ್ಕೃತಿ ಮತ್ತು ವಿವಿಧ ಜಾತಿ ಮತ್ತು ಭಾಷೆಗಳ ನೆಲೆಗಟ್ಟು ಹೊಂದಿರುವ ಈ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಪಂಕ್ತಿ ಎಂಬುದೇ ಆರ್ ಎಸ್ ಎಸ್ ಸಂಕಲ್ಪವಾಗಿರಬೇಕೇ ವಿನಹ ಇದು ಏಕಮುಖ ಮತ್ತು ಏಕದೃಷ್ಟಿಯದ್ದು ಆಗಿರಬಾರದು.

Related Posts

Leave a Reply

Your email address will not be published. Required fields are marked *