ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಾತಿನಂತೆ ಎಲ್ಲರೂ ನಡೆಯಬೇಕಿದೆ. ಅನಾವಶ್ಯಕ ಗೊಂದಲ ಪಕ್ಷಕ್ಕೂ, ಕಾರ್ಯಕರ್ತರಿಗೂ ಒಳ್ಳೆಯದಲ್ಲ. ಯಾರೇ ನಾಯಕರು ಆದರೂ ಕೂಡಾ ಖರ್ಗೆ ಸಾಹೇಬರ ಮಾತು ಕೇಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಬೆಳಗಾವಿ ಅಧಿವೇಶನ ಉತ್ತಮವಾಗಿ ನಡೆದಿದೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಇದೊಂದು ವಿಚಾರದಲ್ಲಿ ಸ್ವಲ್ಪ ಗೊಂದಲ ಇದೆ, ಯಾರೂ ಕೂಡಾ ಹೇಳಿಕೆ ಕೊಡುವುದು ಸರಿ ಅಲ್ಲ ಎಂದರು.
ಶಾಸಕರು ಮಾಧ್ಯಮಗಳ ಪ್ರಶ್ನೆಗಳಿಗೆ ಅವರವರ ನಾಯಕರ ಬಗ್ಗೆ ಹೇಳಿದ್ದಾರೆ, ಒಮ್ಮೊಮ್ಮೆ ಏನೋ ಹೇಳಲು ಹೋಗಿ, ಏನೋ ಆಗಿ ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಯಾವುದೇ ಗುಂಪುಗಾರಿಕೆ ಇಲ್ಲ, ಭಿನ್ನಮತ ಇಲ್ಲ. ಡಿನ್ನರ್ ಪಾರ್ಟಿ ಅವರವರ ಇಷ್ಟಾನು ಸಾರವಾಗಿ ಸೇರುತ್ತೇವೆ, ಸ್ನೇಹಿತರು ಸೇರ್ಸಿ ಡಿನ್ನರ್ ಪಾರ್ಟಿ ಮಾಡುತ್ತಾರೆ. ನಾನು ಕೂಡಾ 50-60 ಮಂದಿ ಶಾಸಕರನ್ನ ಸೇರ್ಸಿ ಡಿನ್ನರ್ ಮಾಡಿದ್ದೆ. ಬೆಳಗಾವಿಯಲ್ಲಿ ಪಾರ್ಟಿ ಮಾಡಿದ್ದೇವೆ, ಚರ್ಚೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಔಷಧಿ ಸರಬರಾಜು ಆಗುತ್ತಿದೆ, ರೋಗಿಗಳು ಬರ್ತಿದ್ದಾರೆ. ಸ್ಥಳೀಯವಾಗಿ ಆಸ್ಪತ್ರೆಗೆ ಔಷಧಿ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಒಬ್ಬರು ವೈದ್ಯರು ಮಾತ್ರ ರಾಜೀನಾಮೆ ಕೊಟ್ಟಿದ್ದಾರೆ, ಈ ಬಗ್ಗೆ ಪರಿಶೀಲನೆ ಮಾಡಲು ಹೇಳಿದ್ದೇನೆ ಎಂದರು. ಸದ್ಯದಲ್ಲೇ ಉಳ್ಳಾರ್ತಿ ಸರ್ಕಾರಿ ಆಸ್ಪತ್ರೆ ಉದ್ಘಾಟನೆ ಮಾಡುತ್ತೇವೆ, ಸ್ಥಳೀಯ ಶಾಸಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ನಾಟಕ ಮಾಡುತ್ತಿದ್ದೆ ಎಂಬ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಎಲ್ಲಾ ಅಂಕಿಅಂಶಗಳ ಆಧಾರದ ಮೇಲೆ ಚರ್ಚೆ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಏನೂ ಹೇಳುತ್ತಿದ್ದೇವೆ ಎಂಬುದು ಮೊದಲು ತಿಳಿದುಕೊಳ್ಳಲಿ. ಮಹದಾಯಿ ವಿಚಾರ, ಕಬ್ಬಿನ ವಿಚಾರ, ಅಪ್ಪರ್ ಕೃಷ್ಣ ಸೇರಿ ಹಲವು ಯೋಜನೆ ಕೇಂದ್ರ ಘೋಷಣೆ ಮಾಡಿದ ಹಣ ಕೊಟ್ಟಿಲ್ಲ. ಎಲ್ಲಿ ಸ್ಪಂದಿಸಬೇಕು ಅಲ್ಲಿ ಸ್ಪಂದಿಸುತ್ತಿಲ್ಲ, ಅವರ ಕೆಲಸ ನಾವು ಮಾಡುತ್ತಿದ್ದೇವೆ. ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ನಮ್ಮ ಸರ್ಕಾರ ಸ್ಪಂದಿಸಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಸಂಸತ್ ನಲ್ಲಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಏನ್ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರು ಏನೂ ಕೆಲಸ ಮಾಡ್ತಾರೆ, ಸರಿ ಪಡಿಸಬೇಕಿತ್ತಲ್ವ, ಕೇಂದ್ರ ಸಚಿವರಾಗಿ ಕುಮಾರ್ ಸ್ವಾಮಿ ಕೂರಿಸಿದ್ದಾರೆ, ಮೋದಿ, ಅಮಿತ್ ಷಾ ಮುಂದೆ ಯಾರೂ ಮಾತನಾಡಲ್ಲ. ಕುಮಾರಸ್ವಾಮಿ ಅವರಿಗೆ ಯಾವುದೇ ಪವರ್ ಕೂಡಾ ಇಲ್ಲ, ಸುಮ್ನೇ ಇರ್ಬೇಕು. ಬಿಜೆಪಿ ಕೇಂದ್ರ ಮಂತ್ರಿಗಳು, ಸಂಸದರ ಮಾತು ನಡೆಯಲ್ಲ. ಕರ್ನಾಟಕ ವಿಚಾರದಲ್ಲಿ ಕೇಂದ್ರ ಸರ್ಕಾರ ತಾತ್ಸಾರ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಿಂದ ಬೆಳಗಾವಿ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಡಿಸಿ ಅವರು ಏನ್ ಕೆಲಸ ಮಾಡ್ಬೇಕು ಮಾಡ್ತಾರೆ. ಮಹಾರಾಷ್ಟ್ರದಲ್ಲಿ ರಾಜಕಾರಣಕ್ಕೆ ಈ ವಿಚಾರ ಬಳಸುತ್ತಿ ದ್ದಾರೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಸಮಸ್ಯೆ ವಿಚಾರದ ಬಗ್ಗೆ ಮಾತನಾಡಿ, ಡಯಾಲಿಸಿಸ್‌ಗೆ ನಮ್ಮ ಸರ್ಕಾರ ಬಂದ ಬಳಿಕ ಉತ್ತಮ ಏಜೆನ್ಸಿ ಕೊಟ್ಟಿದ್ದೇವೆ, ಉತ್ತಮ ಮಿಷನ್ ಇದೆ, ಉತ್ತಮ ಕೆಲಸ ಮಾಡ್ತಿದೆಎಂದು ಹೇಳಿದರು.


