ತಂದೆ ತಾಯಿಗಳ ಇಚ್ಛೆಗೆ ವಿರುದ್ಧವಾಗಿ, ಅನ್ಯ ಧರ್ಮೀಯರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬನರಿಗೂ ಕಾನೂನು ಸಮಾನ ಅವಕಾಶ ನೀಡಿದ್ದರೂ ಸ್ವಯಾರ್ಜಿತ ಆಸ್ತಿಯನ್ನು ತಂದೆಯಾದವ ಯಾರಿಗೆ ಬೇಕಾದರೂ ಕೊಡಬಹುದು. ಇಂಥ ಆಸ್ತಿಯಲ್ಲಿಯೂ ಕೆಲವೊಮ್ಮೆ ಪ್ರಶ್ನೆ ಮಾಡುವ ಅಧಿಕಾರ ಹೆಣ್ಣುಮಕ್ಕಳಿಗೆ ಬರಬಹುದು. ಆದರೆ ಅಪ್ಪ-ಅಮ್ಮನ ಇಚ್ಛೆಗೆ ವಿರುದ್ಧವಾಗಿ ಬೇರೆ ಧರ್ಮದವರನ್ನು ಮದುವೆಯಾಗಿರುವ ಹೆಣ್ಣುಮಗಳಿಗೆ ಅಪ್ಪ ಆಸ್ತಿ ನೀಡದೆ ಇರಉವುದು, ಆಸ್ತಿಯಿಂದ ಹೊರಕ್ಕೆ ಇಟ್ಟಿರುವುದು ಸರಿಯಾದ ಕ್ರಮ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ಪೀಠ ಈ ಆದೇಶ ಪ್ರಕಟಿಸಿದೆ. ಶೈಲಾ ಜೋಸೆಫ್ ತಮ್ಮ ಧರ್ಮದ ಹೊರಗಿನ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ತಂದೆ ಎನ್.ಎಸ್. ಶ್ರೀಧರನ್ ತಮ್ಮ ಆಸ್ತಿಯಲ್ಲಿ ಆಕೆಗೆ ಪಾಲು ನೀಡಿಲ್ಲ. ಉಳಿದ ಮಕ್ಕಳಿಗೆ ಆಸ್ತಿಯನ್ನು ಸಮನಾಗಿ ಕೊಟ್ಟಿದ್ದರು. ಇದನ್ನು ಪ್ರಶ್ನಿಸಿ ಶೈಲಾ ಮೊದಲಿಗೆ ಅಧೀನ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು, ಅಲ್ಲಿ ಆಕೆಯ ಪರವಾಗಿ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ತಂದೆ ಹೈಕೋರ್ಟ್ಗೆ ಹೋದಾಗಲೂ ಮಗಳ ಪರವೇ ತೀರ್ಪು ಸಿಕ್ಕಿತ್ತು.
ಬಳಿಕ ತಂದೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಅಧೀನ ಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಶ್ರೀಧರನ್ ಮಾಡಿರುವುದು ಸರಿಯಾಗಿದೆ. ಶೈಲಾಗೆ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿದೆ. ಮಗಳು ಶೈಲಾಳನ್ನು ಮಾತ್ರ ಆಸ್ತಿಯಿಂದ ದೂರ ಇಟ್ಟಿರುವುದು ಅವರ ಸ್ವ ಇಚ್ಛೆ. ಆದ್ದರಿಂದ ಅದನ್ನು ಪ್ರಶ್ನಿಸುವ ಹಕ್ಕು ಆಕೆಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಸ್ವಯಾರ್ಜಿತ ಆಸ್ತಿ ಆಸ್ತಿಯನ್ನು ಯಾರಿಗೆ ಕೊಡಬೇಕು ಎನ್ನುವುದು ತಂದೆಗೆ ಇಚ್ಛೆ, ಈ ವಿಷಯದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.


