ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮನುಷ್ಯ ಸಮಾಜ ನಿರ್ಮಾಣವಾಗಬೇಕು. ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಮಳವಳ್ಳಿಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮತ್ಸು ತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭ ದಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಯಂತೋತ್ಸವಗಳು ಹಲವು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆದುಕೊಂಡು ಬರುತ್ತಿದ್ದು, ಮುಂದಿನ ವರ್ಷ ಗುಂಡ್ಲುಪೇಟೆಯಲ್ಲಿ ನಡೆಯಲಿರುವುದು ಸಂತೋಷದ ವಿಚಾರ. ಈ ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದ ಶಾಸಕರಾದ ಶ್ರೀ ನರೇಂದ್ರಸ್ವಾಮಿಯವರಿಗೆ ಅಭಿನಂದನೆಗಳು. ಈ ದೇಶದಲ್ಲಿ ಹಲವಾರು ಸಾಧುಸಂತರು, ಸೂಫಿ ಸಂತರು ಸಮಾಜದ ಬದಲಾವಣೆಗೆ ಶ್ರಮಿಸಿದ್ದು, ಈ ಪ್ರಯತ್ನದಲ್ಲಿ ಶ್ರೀಗಳು ಮೇಲ್ಪಂಕ್ತಿಯಲ್ಲಿ ನಿಲ್ಲು ತ್ತಾರೆ ಎಂದು ಹೇಳಿದರು.
ಸಮಾಜದಲ್ಲಿ ವಿವಿಧ ಜಾತಿಧರ್ಮಗಳಿದ್ದು, ಅಸಮಾನತೆಯ ಹುಟ್ಟಿಗೆ ಕಾರಣವಾಗಿದೆ. ಈ ಅಸಮಾನತೆ ನಿವಾರಣೆಯಾಗದೇ ಸಮಾಜದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ. ಬಸವಾದಿ ಶರಣರು ಮನುಷ್ಯ ಸಮಾಜ, ಸಮಾನ ಸಮಾಜ ನಿರ್ಮಾಣವಾಗ ಬೇಕೆಂದು ಅವಿರತ ಶ್ರಮಿಸಿದರು. ಆದಾಗ್ಯೂ ಸಮಾಜದಲ್ಲಿ ಜಾತಿವ್ಯವಸ್ಥೆ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಕವಿ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಸ್ಥಾಪನೆಯಾಗಲು ಮಾನವೀಯ ಸಮಾಜ ನಿರ್ಮಾಣವಾಗಬೇಕು. ಯಾವುದೇ ಧರ್ಮವಾಗಲಿ ಪ್ರೀತಿ ಧರ್ಮವನ್ನು ಬೋಧಿಸುತ್ತವೆಯೇ ಹೊರತು ದ್ವೇಷವನ್ನು ಬೋಧಿಸುವುದಿಲ್ಲ. ಇದು ನಮ್ಮ ಸಂಸ್ಕೃತಿ.ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮನುಷ್ಯ ಸಮಾಜ ನಿರ್ಮಾಣವಾಗಬೇಕು. ಸಮಾಜದಲ್ಲಿ ದ್ವೇಷಾಸೂಯೆ ಬಿತ್ತುವ ಅನೇಕ ಶಕ್ತಿಗಳು ಸಮಾಜದಲ್ಲಿ ಇವೆ. ಅಂತಹ ಶಕ್ತಿಗಳ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಡತ್ವದ ಜಾತಿ ವ್ಯವಸ್ಥೆ ನಿವಾರಣೆಯಾಗಬೇಕಾದರೆ ಆರ್ಥಿಕ , ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸಮಸಮಾಜ ನಿರ್ಮಿಸಲು ಸಾಧ್ಯ. ಮೌಢ್ಯಗಳಿಂದ ದೂರವಾಗಿ ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣವಾಗಬೇಕು ಎಂದು ಬಸವಾದಿ ಶರಣರರು ತಿಳಿಸಿದರು. ಇಂದಿಗೂ ಹಲವರು ಮೌಢ್ಯಗಳನ್ನು ನಂಬುತ್ತಾರೆ.ಹುಟ್ಟು ಸಾವಿನ ನಡುವಿನ ಜೀವನವನ್ನು ನಾವು ಸಾರ್ಥಕಗೊಳಿಸಿಕೊಳ್ಳಬೇಕು. ವಿದ್ಯಾವಂತರಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯಿರಬೇಕು. ಸಮಾಜದಲ್ಲಿ ಸಮಾಜ ಮುಖಿಯಾಗಿ ಬಾಳುವುದು ಮುಖ್ಯ ಮನುಷ್ಯ ಮನುಷ್ಯರ ನಡುವಿನ ದ್ವೇಷ ಅಮಾನವೀಯ ಎಂದು ಹೇಳಿದರು.
ಮನುಷ್ಯನ ಕಷ್ಟ ಸುಖಗಳಿಗೆ ಸ್ಪಂದಿಸುವುದೇ ದಾಸೋಹ. ದೇ ಜ ಗೌ ಅವರು ಕಾಯಕ ಎಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ ಎಂದು ಹೇಳಿದ್ದರು. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು. ಒಬ್ಬರು ಉತ್ಪಾದಿಸಿದ್ದನ್ನು ಮತ್ತೊಬ್ಬರು ಅನುಭವಿಸುವಂತಾಗಬಾರದು ಎಂದರು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಅಸಮಾನತೆ ಹೋಗಬೇಕಾದರೆ, ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯ ಗಳಿಸಿದ್ದು ಯಶಸ್ವಿಯಾಗುವುದಿಲ್ಲ. ಅಸಮಾನತೆಯಿಂದ ನರಳುವವರು ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡ್ತಾರೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಅಸಮಾನತೆ ಹೋಗಬೇಕು ಎಂದು ಅವರು ಎಚ್ಚರಿಕೆ ನೀಡಿದ್ದರು. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವ ಪ್ರಯತ್ನವನ್ನು ಎಲ್ಲರೂ ಮಾಡೋಣ ಎಂದರು.


