Menu

ಬೆಂಗಳೂರಿನ ಭವಿಷ್ಯಕ್ಕಾಗಿ ಟನಲ್ ರಸ್ತೆ, ಡಬಲ್ ಡೆಕ್ಕರ್, ಮೇಲ್ಸೇತುವೆ ಯೋಜನೆ

“ಬೆಂಗಳೂರು ಭವಿಷ್ಯದ ನಗರವಾಗಿ ರೂಪುಗೊಳ್ಳುತ್ತಿದ್ದು, ಇದಕ್ಕಾಗಿ ನಮ್ಮ ಸರ್ಕಾರ ಟನಲ್ ರಸ್ತೆ, ಮೇಲ್ಸೇತುವೆ, ಡಬಲ್ ಡೆಕ್ಕರ್ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಬೆಂಗಳೂರಿನ ಬಾಲ್ಡ್ ವಿನ್ ಶಾಲೆಯಲ್ಲಿ  ಏರ್ಪಡಿಸಿದ್ದ ಯುನೈಟೆಡ್ ಕ್ರಿಸ್ಮಸ್ ಆಚರಣೆಯಲ್ಲಿ ಡಿಸಿಎಂ  ಶಿವಕುಮಾರ್  ಭಾಗವಹಿಸಿ ಮಾತನಾಡಿದರು. “ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿ ಪರರು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. 20 ವರ್ಷಗಳ ಹಿಂದೆ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು, ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. 1.30 ಕೋಟಿ ವಾಹನಗಳಿವೆ. ಆದರೆ ರಸ್ತೆ ಮಾತ್ರ ಆಗ ಇದ್ದಷ್ಟೇ ಇದೆ. ಹೀಗಾಗಿ ನಾನು ಟನಲ್ ಹಾಗೂ ಮೇಲ್ಸೇತುವೆ ಮಾಡಲು ಹೊರಟಿದ್ದೇನೆ, ಕೆಲವರು ವಿರೋಧ ಮಾಡುತ್ತಿ ದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನನಗಾಗಿ ಮಾಡುತ್ತಿಲ್ಲ. ಜನರಿಗಾಗಿ ಮಾಡುತ್ತಿದ್ದೇನೆ” ಎಂದರು.

“ಬೆಂಗಳೂರು ಭವಿಷ್ಯದ ನಗರಿ. ಹೀಗಾಗಿ ಇಡೀ ವಿಶ್ವ ಬೆಂಗಳೂರಿನತ್ತ ನೋಡುತ್ತಿದೆ. ನಾನು 2004ರಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಅಮೆರಿಕದ ರಾಯಭಾರಿ ಬಂದು ನನ್ನನ್ನು ಭೇಟಿ ಮಾಡಿದ್ದರು. ಆಗ ಅವಳಿ ಕಟ್ಟಡ ಸ್ಫೋಟ ನಡೆದಿತ್ತು. ಅವರು ಅಕ ವಿಚಾರ ಹಂಚಿಕೊಂಡರು. ಆಗ ಅವರು ಭವಿಷ್ಯದಲ್ಲಿ ಬೆಂಗಳೂರಿಗೆ ನ್ಯೂಯಾರ್ಕ್ ನಗರಕ್ಕಿಂತ ಹೆಚ್ಚು ಆದ್ಯತೆ ಸಿಗುತ್ತದೆ. ನಮ್ಮ ಸಮೀಕ್ಷೆಯಲ್ಲಿ ಬೆಂಗಳೂರಿನ ಶಿಕ್ಷಣ, ಸಂಸ್ಕೃತಿ, ಶಿಕ್ಷಣ, ಪ್ರತಿಭೆಗಳು ಬೇರೆಲ್ಲೂ ಇಲ್ಲ ಎಂದು ಹೇಳಿದರು. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ ಎಂದು ಹೇಳಿದ್ದರು” ಎಂದು ಹೇಳಿ ದರು.

“ಇಲ್ಲಿ ಶಿಕ್ಷಕರೇ ಇದ್ದೀರಿ ನೀವು ನಮ್ಮ ಮಕ್ಕಳನ್ನು ತಯಾರು ಮಾಡುತ್ತಿದ್ದೀರಿ. ನಿಮ್ಮ ಕೊಡುಗೆ ಅಪಾರ. ಬೆಂಗಳೂರು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಕೇವಲ ನಮ್ಮೊಬ್ಬರಿಂದ ಮಾತ್ರ ಸಾಧ್ಯವಿಲ್ಲ. ನಿಮ್ಮಂತಹ ಶಿಕ್ಷಕರು ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿ ಮಾಡಿದ ಪರಿಣಾಮ ಇದು ಸಾಧ್ಯವಾಗಿದೆ. ಹೀಗಾಗಿ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಪರಿ ಗಣಿಸುತ್ತಾರೆ. ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಮಕ್ಕಳನ್ನು ತಯಾರಿ ಮಾಡುವ ಮೂಲಕ ದೇಶವನ್ನು ರೂಪಿಸುತ್ತಿದ್ದೀರಿ” ಎಂದರು.

“ಈ ಸಂಸ್ಥೆಗೆ ದೊಡ್ಡ ಇತಿಹಾಸವಿದೆ. ನೀವು ನಿಮ್ಮ ಇತಿಹಾಸ ಮರೆಯಬೇಡಿ. ನಾವು ನಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನೀವು ನಿಮ್ಮ ಸಂಸ್ಥೆ, ಬೆಂಗಳೂರನ್ನು ಬೆಳೆಸುತ್ತಿದ್ದೀರಿ. ನಾವೆಲ್ಲರೂ ಇಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ಸೇರಿದ್ದೇವೆ. ಮಾನವಿಯತೆ, ಹೃದಯ ವೈಶಾಲ್ಯತೆ ಕುರಿತ ಏಸುಕ್ರಿಸ್ತರ ಸಂದೇಶವನ್ನು ಕೇಳಿದ್ದೇವೆ. ನಿಮ್ಮೆಲ್ಲರಿಗೂ ಒಳ್ಳೆಯ ದಾಗಲಿ. ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಯಾವುದೇ ಸಂದರ್ಭದಲ್ಲಿ ನಿಮಗೆ ಏನೇ ಸಮಸ್ಯೆ ಬಂದರೂ ನಾನು ಇದ್ದೇನೆ. ನಿಮ್ಮ ಆಶೀರ್ವಾದ ಕೂಡ ನಮಗೆ ಮುಖ್ಯ” ಎಂದು ತಿಳಿಸಿದರು.

“ನನ್ನ ಬದುಕಿನಲ್ಲಿ ನಾನು ಸಾಕ್ಷಿಗುಡ್ಡೆ ಬಿಟ್ಟುಹೋಗಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಉತ್ತರ ಭಾಗದಲ್ಲಿ ಈ ಶಿಕ್ಷಣ ಸಂಸ್ಥೆಗೆ ಜಾಗ ನೀಡಲು ಬದ್ಧವಾಗಿದ್ದೇನೆ. ನನಗೆ ಎಲ್ಲಾ ಧರ್ಮ, ಮಾನವೀಯತೆ ಮೇಲೆ ನಂಬಿಕೆ ಇಟ್ಟಿದ್ದೇವೆ” ಎಂದರು.

“ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮಹಲವು. ಎಲ್ಲಾ ಧರ್ಮಗಳು ಮಾನವೀಯತೆಯನ್ನೇ ಪ್ರತಿಪಾದಿಸುತ್ತವೆ. ದೇವರು ವರ ಹಾಗೂ ಶಾಪ ನೀಡವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡು ತ್ತೇವೆ ಎಂಬುದು ಬಹಳ ಮುಖ್ಯ. ಮಕ್ಕಳು ಅನೇಕ ಕನಸು ಕಾಣುತ್ತಾರೆ. ನಾವು ಯಶಸ್ವಿಯಾಗಬೇಕಾದರೆ, ಕನಸು ಕಾಣಬೇಕು, ಕನಸು ಈಡೇರಿಸಲು ಬದ್ಧರಾಗಿಗರಬೇಕು, ಅದಕ್ಕಾಗಿ ಶಿಸ್ತಿನಿಂದ ಇರಬೇಕು. ಅದೇ ರೀತಿ ನಾವಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ ಶಿಸ್ತಿನಿಂದ ಇಲ್ಲದಿದ್ದರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಾವು ಈಗ ಹೊಸ ಯುಗದಲ್ಲಿದ್ದೇವೆ. ಎಐ ಯುಗದಲ್ಲಿದ್ದೇವೆ. ಇದಕ್ಕೆ ತಕ್ಕಂತೆ ನಾವು ಸಿದ್ಧವಾಗಬೇಕು. ಹೀಗಾಗಿ ನಾವು ಮಕ್ಕಳನ್ನು ಬಹಳ ಜಾಗರೂಕತೆಯಿಂದ ಬೆಳೆಸಬೇಕು. ಈಗ ಮಕ್ಕಳ ಗಮನ ಕೆಡಿಸಲು ಅನೇಕ ಅಂಶಗಳಿವೆ. ಹೀಗಾಗಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡಬೇಕು. ನೀವು ತಯಾರು ಮಾಡುವ ಮಕ್ಕಳು, ದೇಶದ ಆಸ್ತಿಗಳಾಗುತ್ತಾರೆ. ನಿಮ್ಮ ಪ್ರತಿ ಹೆಜ್ಜೆಯಲ್ಲೂ ಅವರಿಗೆ ಮಾದರಿಯಾಗಿರಬೇಕು” ಎಂದು ಸಲಹೆ ನೀಡಿದರು.

“ನಾನು 12 ವರ್ಷ ವಯಸ್ಸಿನಲ್ಲಿ ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗಲೇ ನಾನು ರಾಜಕಾರಣಿಯಾಗಬೇಕು ಎಂದು ನಿರ್ಧರಿಸಿದ್ದೆ. ನಂತರ ಎಸ್ ಜೆಆರ್ ಸಿ ಕಾಲೇಜಿನಲ್ಲಿ ಓದುವಾಗ ದೇವೇಗೌಡರ ವಿರುದ್ಧ ಮೊದಲ ಬಾರಿಗೆ ಸ್ಪರ್ಧಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದೇನೆ. ಕಳೆದ 8 ಚುನಾವಣೆಗಳಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಹುಟ್ಟತಾ ಕೃಷಿಕ, ವೃತ್ತಿಯಲ್ಲಿ ವ್ಯಾಪಾರಸ್ಥ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ನಾನು ನನ್ನ 46ನೇ ವಯಸ್ಸಿನಲ್ಲಿ ಪದವಿ ಪಡೆದೆ. ನನ್ನ ತಂದೆ ನಾನು ಇಂಜಿನಿಯರ್ ಆಗಬೇಕು ಎಂದು ಬಯಸಿದರು, ನಾನು ಇಜಿನಿಯರ್ ಆಗಲಿಲ್ಲ. ಇಂಜಿನಿಯರಿಂಗ್ ಕಾಲೇಜು ಆರಂಭಿಸಿದೆ” ಎಂದು ತಿಳಿಸಿದರು.

“ನಾನು 20 ವರ್ಷಗಳ ಹಿಂದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರತನ್ ಟಾಟಾ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ನನಗೆ ಒದು ಮಾತು ಹೇಳಿದ್ದರು. ನೀವು ವೇಗವಾಗಿ ಸಾಗಬೇಕಾದರೆ ನೀವು ಒಬ್ಬರೇ ಸಾಗಿ, ನೀವು ಬಹುದೂರ ಸಾಗಬೇಕಾದರೆ, ಬೇರೆಯವರ ಜೊತೆ ಸಾಗಿ ಎಂದರು. ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು” ಎಂದರು.

ಸರ್ಕಾರದ ಮತ್ತೊಂದು ಹಗರಣ ಬಯಲಿಗೆ ಎಳೆಯುತ್ತೇವೆ ಎಂಬ ಮಹೇಶ್ ಟೆಂಗಿನಕಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಾವ ಹಗರಣ ಬೇಕಾದರೂ ತರಲಿ. ಸರ್ಕಾರಕ್ಕೆ ತೆರಿಗೆ ರೂಪ ದಲ್ಲಿ ಹಣ ಬಂದಂತೆ ನಾವು ಫಲಾನುಭವಿಗಳಿಗೆ ನೀಡುತ್ತೇವೆ. ಇದು ಹಗರಣವೇ? ಕೇಂದ್ರ ಸರ್ಕಾರ ನಮಗೆ ಒಂದೇ ಬಾರಿಗೆ ಅನುದಾನ ನೀಡುತ್ತದೆಯೇ? ಸಂಸ್ಥೆಗಳಲ್ಲಿ ಸಿಬ್ಬಂದಿಗೆ ವೇತನ ನೀಡುವಾಗಲೂ ಕೆಲವೊಮ್ಮೆ ತಡವಾಗುತ್ತದೆ. ನಮ್ಮ ಸರ್ಕಾರ 24-25 ತಿಂಗಳಿಂದ ಜನರಿಗೆ ಹಣ ನೀಡುತ್ತಲೇ ಬಂದಿದ್ದೇವೆ. ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ತಾವು ಘೋಷಿಸಿದಂತೆ ಇನ್ನು ಹಣ ಕೊಡಲು ಆರಂಭಿಸಿಯೇ ಇಲ್ಲ. ಇಲ್ಲಿ ಯಾವುದೇ ಹಗರಣಗಳಿಲ್ಲ. ಯಾರಾದರೂ ಹಣ ತಿಂದಿದ್ದರೆ ಹಗರಣ ಎನ್ನಬಹುದು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *