ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ತೀವ್ರಗೊಂಡಿದ್ದು, ಶೀತಗಾಳಿಗೆ ಜನ ತತ್ತರಿಸುತ್ತಿದ್ದಾರೆ, ಈ ನಡುವೆ ಮಟನ್, ಚಿಕನ್, ಎಗ್ ದರ ಏರಿಕೆಯಾಗಿ ನಾನ್‌ವೆಜಿಟೇರಿಯನ್ಸ್‌ಗೆ ಬಿಸಿ ಮುಟ್ಟಿಸಿದೆ.
ತೀವ್ರ ಚಳಿಹಾಗೂ ಶೀತಗಾಳಿಯಿಂದ ಕಂಗೆಟ್ಟಿರುವ ಜನ ಪೌಷ್ಟಿಕ ಆಹಾರಕ್ಕಾಗಿ ಮಟನ್, ಚಿಕನ್, ಎಗ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ಹವಾಮಾನ ವೈಪರೀತ್ಯದಲ್ಲಿ ಕುರಿ, ಕೋಳಿ ಉತ್ಪಾ ದನೆ ಕುಸಿತ ಕಂಡಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಕೂಡ ಹೆಚ್ಚಿದ ಕಾರಣ ಮಟನ್ ಬೆಲೆ ಕೆಜಿಗೆ ಸಾವಿರ ರೂ. ತಲುಪಿದೆ. ಚಿಕನ್, ಎಗ್ ಬೆಲೆಯೂ ಏರಿಕೆಯಾಗಿದೆ.
ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮಟನ್ ದರದಲ್ಲಿ ಗರಿಷ್ಠ ಏರಿಕೆಯಾಗಿದೆ. ಕೆಜಿ ಮಟನ್ ಬೆಲೆ ಗೆ 900 ದಾಟಿದ್ದು, ಮುಂದಿನ ವಾರ ಒಂದು ಸಾವಿರ ರೂ. ಮೀರುವ ಸಾಧ್ಯತೆ ಇದೆ. 240 ರೂ. ಇರುತ್ತಿದ್ದ ಚಿಕನ್ ದರ ಕೆಜಿಗೆ 310 ರೂ. ಗೆ ಏರಿಕೆಯಾಗಿದೆ.
ಈ ಬಾರಿಯ ವಿಪರೀತ ಚಳಿಯಿಂದ ಉತ್ಪಾದನೆ ಕುಸಿತ,ಬೇಡಿಕೆ ಹೆಚ್ಚಳದಿಂದ ದರ ಏರಿಕೆಯಾಗಿದ್ದು, ಮಾಂಸಪ್ರಿಯರನ್ನು ಕಂಗೆಡಿಸಿದೆ. ಮಟನ್ ಸೂಪ್, ಕೈಮಾ, ಗ್ರೇವಿ, ಬಿರಿಯಾನಿ, ಫ್ರೈ ಯಾವುದಾದರೂ ಬೇಕೆನಿಸಿದರೆ ಯೋಚಿಸಿಬೇಕಾದ ಪರಿಸ್ಥಿತಿ ಉಂಟಾಗಿದೆ.


