ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಇಲ್ಲ, ಇದರ ಸೇವನೆಯ ಬಗ್ಗೆ ಆತಂಕ ಅಗತ್ಯವಿಲ್ಲ ಎಂದು ಭಾರತೀಯ ಆಹಾರಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೇಳಿದೆ.
ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಇದೆ ಎಂಬ ವದಂತಿ ರಾಜ್ಯದಲ್ಲಿ ಹರಡಿದ್ದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಈ ವಿಚಾರ ಪ್ರಕಟಿಸಿದೆ. ಕ್ಯಾನ್ಸರ್‌ಕಾರಕ ಅಂಶ ಮೊಟ್ಟೆಗಳಲ್ಲಿ ಪತ್ತೆ ಯಾಗಿರುವುದಾಗಿ ಯೂಟ್ಯೂಬ್ ಚಾನಲ್‌ವೊಂದು ಪ್ರಸಾರ ಮಾಡಿತ್ತು. ಈಕಾರಣಕ್ಕೆ ಹಲವು ವಿಧದ ಮೊಟ್ಟೆಗಳ ಪರೀಕ್ಷೆ ನಡೆಸಿರುವ ಎಫ್‌ಎಸ್‌ಎಸ್‌ಎಐ, ಇದು ಜನರ ದಾರಿತಪ್ಪಿಸುವ ಮಾಹಿತಿ, ಈ ಆರೋಪಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
2011ರ ಆಹಾರ ಸುರಕ್ಷತೆ ನಿಯಮದಡಿ ಕೋಳಿ ಸಾಕಣೆಯಲ್ಲಿ ನೈಟ್ರೋಪ್ಯೂರಾನ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ರತಿ ಕೆ.ಜಿ.ಯಲ್ಲಿ 1.0 ಮೈಕ್ರೋಗ್ರಾಂನಷ್ಟಿದ್ದರೆ ಯಾವುದೇ ಅಪಾಯವಿಲ್ಲ ಎಂದು ಎಫ್‌ಎಸ್‌ಎಸ್‌ಎಐ ಮಾಹಿತಿ ನೀಡಿದೆ. ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಅಂಶ ಇದೆ ಎಂದು ಯುಟ್ಯೂಬ್ ವೀಡಿಯೊದಲ್ಲಿ ಹೇಳಲಾಗಿತ್ತು. ಇದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ರಾಜ್ಯ ಸರ್ಕಾರ ಎಚ್ಚೆತ್ತು ಮೊಟ್ಟೆ ಪರೀಕ್ಷಿಸಲು ಆದೇಶಿಸಿತ್ತು.


