Menu

ಬಾಂಗ್ಲಾದಲ್ಲಿ ಮತ್ತೆ ಅರಾಜಕತೆ! ವಿಶ್ವಸಂಸ್ಥೆಯ ಹೊಣೆಗಾರಿಕೆ ಏನು?

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಬಾಂಗ್ಲಾದೇಶದ ಅರಾಜಕತೆ ವಿಚಾರದಲ್ಲಿ ಗಂಭೀರ ಚರ್ಚೆ ಮಾಡಬೇಕಿದೆ. ದೇಶಗಳ ಸಾರ್ವಭೌಮತ್ವದ ವಿಚಾರದಲ್ಲಿ ಭದ್ರತಾ ಮಂಡಳಿಯ ಪಾತ್ರ ಸೀಮಿತವಾದರೂ, ಹಿಂಸೆ ಮತ್ತು ಅರಾಜಕತೆಯ ನಾಡಿನಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಹೇಗೆ ಮರುಸ್ಥಾಪಿಸಬೇಕೆಂಬ ಹೊಣೆಗಾರಿಕೆ ಭದ್ರತಾ ಮಂಡಳಿಗೆ ಇರಬೇಕಲ್ಲವೇ ?

ನೆರೆ ದೇಶವಾದ ಬಾಂಗ್ಲಾದೇಶದಲ್ಲಿ ಮತ್ತೆ ಅರಾಜಕತೆ ತಲೆಯೆತ್ತಿದೆ. ಭಾರತದ ವಿರುದ್ಧ ತಿರುಗಿಬಿದ್ದ ದಂಗೆಕೋರ ಉಸ್ಮಾನ್ ಸಾವಿಗೀಡಾಗಿದ್ದು , ಇದು ದೇಶದಲ್ಲಿ ಅಶಾಂತಿ ಮತ್ತು ಹಿಂಸಾ ಚಾರಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಎರಡು ಮಾಧ್ಯಮ ಕಚೇರಿಗಳನ್ನು ಉದ್ರಿಕ್ತ ಗುಂಪು ಧ್ವಂಸ ಮಾಡಿ ಪತ್ರಿಕಾ ಕಚೇರಿಗೆ ಬೆಂಕಿ ಇಟ್ಟಿದೆ.

ಅವಾಮಿ ಪಕ್ಷದ ನಾಯಕಿ ಹಾಗೂ ಪ್ರಧಾನಿಯೂ ಆಗಿದ್ದ ಶೇಕ್ ಹಸೀನಾ ಪದಚ್ಯುತಿ ಬಳಿಕ, ಈ ದೇಶದ ಆಂತರಿಕ ಆಡಳಿತ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಆರ್ಥಿಕ ಪರಿಣಿತ ಮಹಮ್ಮದ್ ಯೂನಸ್ ಹಂಗಾಮಿಯಾಗಿ ಆಡಳಿತದ ಚುಕ್ಕಾಣಿ ಯನ್ನು ಹಿಡಿದಿದ್ದರೂ, ಪರೋಕ್ಷವಾಗಿ ಮಿಲಿಟರಿ ಆಡಳಿತವೇ ಬಾಂಗ್ಲಾದೇಶದಲ್ಲಿ ತನ್ನ ಪಾರುಪತ್ಯ ಮೆರೆದಿದೆ. ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿ ಚುನಾವಣೆ ನಡೆಯಬೇಕಿದ್ದು ಪರೋಕ್ಷವಾಗಿ ಉಸ್ಮಾನ್ ಪಕ್ಷಕ್ಕೆ ಯೂನಸ್ ಬೆಂಬಲವಿದೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಹಸೀನಾ ಮತ್ತು ಆವಾಮಿ ಪಕ್ಷವನ್ನು ಸಂಪೂರ್ಣವಾಗಿ ದೂರವಿಟ್ಟು ಉಸ್ಮಾನ್ ನೇತೃತ್ಚದ ರಾಜಕೀಯ ಸಂಘಟನೆಗೆ ಯೂನಸ್ ಎಲ್ಲ ರೀತಿಯಲ್ಲಿ ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟ.

ಕಳೆದ ಎರಡು ವರ್ಷಗಳಿಂದಲೂ ಇಲ್ಲಿನ ಪ್ರಜಾತಂತ್ರ ಕುಸಿದಿದ್ದು, ಇದು ಭಾರತದ ಕಳವಳಕ್ಕೂ ಕಾರಣವಾಗಿದೆ. ಮಿಗಿಲಾಗಿ ಇಲ್ಲಿ ಹಠಾತ್ ಆಗಿ ತಲೆದೋರಿದ ಹಿಂಸಾಚಾರ ಮತ್ತು ದೊಂಬಿಯ ಫಲವಾಗಿ ಪ್ರಧಾನಿ ಪಟ್ಟದಿಂದ ಪಕ್ಕಕ್ಕೆ ಸರಿದ ಹಸೀನಾ ಅವರಿಗೆ ಭಾರತ ಆಸರೆ ನೀಡಿದೆ. ಆದರೆ ಹಸೀನಾ ಅವರನ್ನು ತಮಗೆ ಹಸ್ತಾಂತರಿಸಬೇಕೆಂದು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಭಾರತವನ್ನು ಕೋರಿದ್ದು ಇದಕ್ಕೆ ಭಾರತ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಹಸೀನಾ ಈ ಸನ್ನಿವೇಶದಲ್ಲಿ ಬಾಂಗ್ಲಾದೇಶ ಪ್ರವೇಶಿಸಿದರೆ ಇದು ಮತ್ತೊಂದು ರಾಜಕೀಯ ಕ್ರಾಂತಿಗೆ ದಾರಿ ಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಬಾಂಗ್ಲಾದೇಶದ ಅರಾಜಕತೆ ವಿಷಯದಲ್ಲಿ ಮತ್ತು ಪ್ರಜಾತಂತ್ರವು ಸಂಪೂರ್ಣವಾಗಿ ಕುಸಿದಿರುವ ದಿಶೆಯಲ್ಲಿ ಗಂಭೀರ ಚರ್ಚೆ ಮಾಡಬೇಕಿದೆ. ದೇಶಗಳ ಸಾರ್ವ ಭೌಮತ್ವದ ವಿಚಾರದಲ್ಲಿ ಭದ್ರತಾ ಮಂಡಳಿಯ ಪಾತ್ರ ಸೀಮಿತವಾದರೂ, ಹಿಂಸೆ ಮತ್ತು ಅರಾಜಕತೆಯ ನಾಡಿನಲ್ಲಿ ಶಾಂತಿ ಮತ್ತು ಜನತೆಯ ನೆಮ್ಮದಿಯನ್ನು ಹೇಗೆ ಮರುಸ್ಥಾಪಿಸ ಬೇಕೆಂಬ ಹೊಣೆಗಾರಿಕೆ ವಿಶ್ವಸಂಸ್ಥೆಯದ್ದು. ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಕೆಲ ದೇಶಗಳ ಪ್ರಜಾತಂತ್ರ ಗಂಡಾಂತರದಲ್ಲಿದ್ದರೂ ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿ ಈ ಕುರಿತು ಗಂಭೀರ ಮತ್ತು ನಿರ್ಣಾ ಯಕ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ದುರದೃಷ್ಟಕರ.

ಒಟ್ಟಿನಲ್ಲಿ ಬಾಂಗ್ಲಾದೇಶದಲ್ಲಿಂದು ನಾಗರಿಕರ ಜೀವನ ದುಗುಡದಲ್ಲಿದೆ . ಹಿಂದು ಧರ್ಮೀಯರ ಮೇಲಿನ ದೌರ್ಜನ್ಯ ಮತ್ತು ಹಿಂದು ದೇವಾಲಯಗಳ ಮೇಲೆ ದಾಳಿ ಹೆಚ್ಚಾಗಿದೆ. ಮಿಗಿಲಾಗಿ ಇಲ್ಲಿ ನೆಲೆಸಿರುವ ಹಿಂದು ಕುಟುಂಬಗಳ ಬದುಕು ಕೂಡಾ ಕ್ಷಣ, ಕ್ಷಣ ಅಪಾಯವನ್ನು ಎದುರಿಸುವಂತಾಗಿದೆ. ಇಲ್ಲಿನ ಭಾರತೀಯರ ರಕ್ಷಣೆಯ ಗುರುತರ ಹೊಣೆಗಾಗಿಕೆ ಕೇಂದ್ರ ಸರ್ಕಾರದ ಮೇಲಿದೆ. ಅದೇನೆ ಇರಲಿ. ನೆರೆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣದಲ್ಲಿ ಈಗ ಸಾರ್ವತ್ರಿಕ ಚುನಾವಣೆ ನಡಯಬೇಕಿದೆ. ಇಂತಹ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಭಾಗವಹಿಸಬೇಕಿದೆ. ಇದಕ್ಕೆ ಪೂರಕ ವಾತಾವರಣವೊಂದು ನಿರ್ಮಾಣವಾಗಬೇಕಿದೆ.

Related Posts

Leave a Reply

Your email address will not be published. Required fields are marked *