Saturday, December 20, 2025
Menu

ಹೈಕಮಾಂಡ್‌ ಕರೆದಾಗ ನಾನು ಸಿಎಂ ಹೋಗುತ್ತೇವೆ, ಕದ್ದುಮುಚ್ಚಿ ಹೋಗಲ್ಲ: ಡಿಕೆ ಶಿವಕುಮಾರ್ 

dk shivakumar

ಬೆಂಗಳೂರು: “ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ದೆಹಲಿ ನಾಯಕರು ನಿಮಗೆ ಆಹ್ವಾನ ನೀಡಿದ್ದಾರಾ ಎಂದು ಕೇಳಿದಾಗ ಈ ರೀತಿ ಉತ್ತರಿಸಿದರು.

“ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಾಕಿದ್ದ ಚಾರ್ಜ್ ಶೀಟ್ ಕೋರ್ಟ್ ನಲ್ಲಿ ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್ಐಆರ್ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.

ವಿಧಾನ ಮಂಡಲ ಅಧಿವೇಶನದ ಬಳಿಕ ನೀವು ಮತ್ತು ಸಿಎಂ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಎಂದು ಚರ್ಚೆ ಇದೆಯಲ್ಲ ಎಂದು ಕೇಳಿದಾಗ, “ಆ ರೀತಿ ಇದ್ದರೆ ನಿಮಗೂ ತಿಳಿಸುತ್ತೇವೆ. ನಿಮಗೆ ತಿಳಿಸದೇ ಏನೂ ಮಾಡುವುದಿಲ್ಲ. ನಾನು ಕದ್ದುಮುಚ್ಚಿ ಹೋಗುವುದಿಲ್ಲ” ಎಂದರು.

ಮಂಗಳವಾರ ದೆಹಲಿಗೆ ಪ್ರಯಾಣ

ದೆಹಲಿ ಪೊಲೀಸರ ವಿಚಾರಣೆಗೆ ಹಾಜರಾಗುವ ಬಗ್ಗೆ ಕೇಳಿದಾಗ, “ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಆಗ ದೆಹಲಿ ಪೊಲೀಸರನ್ನು ಭೇಟಿ ಮಾಡುವೆ. ಅಂದು ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರವಾಗಿ ಸಭೆ ಕರೆದಿದ್ದಾರೆ. ಅಂದು ನಮ್ಮ ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುವೆ. ಇದೇ ವೇಳೆ ಕೇಂದ್ರ ಅರಣ್ಯ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿರುವೆ. ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಲು ತೀರ್ಮಾನಿಸಿರುವೆ. ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು. ಇವೆಲ್ಲ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಗಳನ್ನೂ ಭೇಟಿ ಮಾಡುವೆ” ಎಂದು ತಿಳಿಸಿದರು.

ನಾಗಸಾಧುಗಳು ಆಶೀರ್ವಾದ ಮಾಡಿರುವ ಬಗ್ಗೆ ಕೇಳಿದಾಗ, “ಅವರು ಮನೆಗೆ ಹುಡುಕಿಕೊಂಡು ಬಂದು ಆಶೀರ್ವಾದ ಮಾಡಿದ್ದಾರೆ. ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ. ರಾಜಕೀಯದಲ್ಲಿರುವ ಕಾರಣ ನಮಗೆ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿದಂತೆ ಎಲ್ಲಾ ರೀತಿಯ ಜನರೂ ನಮಗೆ ಬೇಕು. ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ. ವಕ್ಫ್, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *