ನಟ, ಚಿತ್ರಕಥೆಗಾರ ಮತ್ತು ನಿರ್ದೇಶಕ-ನಿರ್ಮಾಪಕರಾಗಿ ಖ್ಯಾತರಾಗಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ನಟ ಶ್ರೀನಿವಾಸನ್ ಇಂದು ಮುಂಜಾನೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದಿಂದ ವಯೋಸಹಜ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು, ತ್ರಿಪ್ಪುನಿತುರ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
48 ವರ್ಷಗಳ ಗಮನಾರ್ಹ ವೃತ್ತಿಜೀವನದಲ್ಲಿ ಶ್ರೀನಿವಾಸನ್ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಸ್ಯ, ಸಾಮಾಜಿಕ ವಿಡಂಬನೆ ಮತ್ತು ಮಾನವೀಯ ಪಾತ್ರಗಳಿಂದ, ಅಮೋಘ ಅಭಿನಯದಿಂದ ಗಮನ ಸೆಳೆದಿದ್ದರು. ಅಪರೂಪದ ಬಹುಮುಖ ಪ್ರತಿಭೆಯಾಗಿದ್ದ ಅವರು ಸುಮಾರು 225 ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯನಟ ಮತ್ತು ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದಾಗ್ಯೂ, ಒಬ್ಬ ಚಿತ್ರಕಥೆಗಾರನಾಗಿ ಶ್ರೀನಿವಾಸನ್ ಅವರ ಪ್ರಭಾವ ದೊಡ್ಡ ಮಟ್ಟದಲ್ಲಿತ್ತು.
ಶ್ರೀನಿವಾಸನ್ ಅವರ ಪ್ರಾಜೆಕ್ಸ್ಟ್ ಗಮನಿಸೋದಾದ್ರೆ, ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ, ಟಿಪಿ ಬಾಲಗೋಪಾಲನ್ ಎಂಎ, ಗಾಂಧಿನಗರ ಸೆಕೆಂಡ್ ಸ್ಟ್ರೀಟ್, ನಾಡೋಡಿಕ್ಕಟ್ಟು, ತಲಯಾನ ಮಂತ್ರಂ, ಗೋಳಾಂತರ ವಾರ್ತಾ, ಚಂಪಕುಳಂ ತಚ್ಚನ್, ವರವೇಲ್ಪು, ಉದಯನನೂರ್ ತಾರಂ, ಮಜಯೇತುಂ ಮುಂಪೆ, ಅಜಯ್ತುಂ ಮುಂಪೆ, ಆಝಾಯ್ತುಂ ಮುಂಪೆ ಸೇರಿ ಹಲವು.
ಅವರ ಅತ್ಯಂತ ಪ್ರಸಿದ್ಧ ಕೆಲಸಗಳಲ್ಲಿ 1991ರ ರಾಜಕೀಯ ವಿಡಂಬನೆಯಾದ ‘ಸಂದೇಶಂ’ ಕೂಡಾ ಒಂದು. ಇದು ರಾಜಕೀಯ ಅವಕಾಶವಾದದಂತಹ ವಿಷಯಗಳ ಸುತ್ತ ಚರ್ಚೆ ಹುಟ್ಟುಹಾಕಿದೆ. ಈ ಚಿತ್ರದ ಪ್ರಸ್ತುತತೆ ತಲೆಮಾರುಗಳಾದ್ಯಂತ ಮುಂದುವರೆದಿದ್ದು, ಶ್ರೀನಿವಾಸನ್ ಅವರ ಭದ್ರವಾದ ಅಧಿಕಾರ ರಚನೆಗಳನ್ನು ಸವಾಲು ಮಾಡಲು ಹೆದರದ ಬರಹಗಾರ ಎಂಬ ಖ್ಯಾತಿಯನ್ನು ಸಾಬೀತುಪಡಿಸಿದೆ.
ನಿರ್ದೇಶಕರಾಗಿಯೂ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರು ಬರೆದು ನಿರ್ದೇಶಿಸಿದ ಚಲನಚಿತ್ರಗಳು, ಮುಖ್ಯವಾಗಿ ವಡಕ್ಕುನೋಕ್ಕಿಯಂತ್ರಂ ಮತ್ತು ಚಿಂತವಿಷ್ಟಯಾಯ ಶ್ಯಾಮಲ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದವು. ಇದು ಅವರ ನಿರೂಪಣೆ, ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಿವೆ.
ಶ್ರೀನಿವಾಸನ್ ತಮ್ಮ ಪತ್ನಿ ವಿಮಲಾ, ಪುತ್ರರಾದ ಖ್ಯಾತ ನಿರ್ದೇಶಕ, ನಟ ಮತ್ತು ಗಾಯಕ ವಿನೀತ್ ಶ್ರೀನಿವಾಸನ್ ಮತ್ತು ಜನಪ್ರಿಯ ನಟ ಧ್ಯಾನ್ ಶ್ರೀನಿವಾಸನ್ ಅವರನ್ನು ಅಗಲಿದ್ದಾರೆ. ಅವರ ನಿಧನ ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತುಂಬಲಾರದ ನಷ್ಟವಾಗಿದೆ. ಅಭಿಮಾನಿಗಳು ಅವರ ಕೆಲಸಗಳನ್ನು ಸ್ಮರಿಸಿ, ಕೊಂಡಾಡುತ್ತಿದ್ದಾರೆ.


