ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡಿದ್ದು, ಬಿಜೆಪಿ ಶಾಸಕ ಬೈರತಿ ಬಸವರಾಜ್ ನಾಪತ್ತೆಯಾಗಿದ್ದಾರೆ. ಸಿಐಡಿ ಅಧಿಕಾರಿಗಳು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಭೂಮಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿತ್ತು. ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಅವರನ್ನು ಪ್ರಕರಣದಲ್ಲಿ ಎ5 ಆಗಿ ಹೆಸರಿಸಲಾಗಿತ್ತು.
ಆರಂಭದಲ್ಲಿ ಪೊಲೀಸರು ತನಿಖೆ ನಡೆಸಿ ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೊಂದಿಗೆ ಶಾಸಕರ ಕುಮ್ಮಕ್ಕು ಇರುವುದು ತನಿಖೆ ವೇಳೆ ಗೊತ್ತಾಗಿದೆ. ಬೈರತಿ ಬಸವರಾಜ್ ಅವರನ್ನು ಹಲವು ಬಾರಿ ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆಯಲ್ಲಿ ಅವರು ಸುಳ್ಳು ಮಾಹಿತಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಬಂಧನವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಬೈರತಿ ಬಸವರಾಜ್ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು, ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ. ಹೈಕೋರ್ಟ್ ಆದೇಶದ ನಂತರ ಅವರು ನಾಪತ್ತೆ ಯಾಗಿದ್ದಾರೆ.
ಸಿಐಡಿ ಅಧಿಕಾರಿಗಳು “ಈ ಪ್ರಕರಣದಲ್ಲಿ ಶಾಸಕರನ್ನು ಬಂಧಿಸಿ ವಿಚಾರಣೆ ನಡೆಸುವುದು ಅತ್ಯಾವಶ್ಯಕ” ಎಂದು ಕೋರ್ಟ್‌ಗೆ ಹೇಳಿದ್ದರು. ಮಹತ್ವದ ಮಾಹಿತಿ ಮತ್ತು ಇತರ ಆರೋಪಿಗಳೊಂದಿಗೆ ಸಂಪರ್ಕದ ಜಾಲ ಪತ್ತೆಹಚ್ಚಲು ಬಂಧನ ಅನಿವಾರ್ಯ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಶಾಸಕರ ಪತ್ತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ನ್ಯಾಯಮೂರ್ತಿ ಸುನಿಲ್ ದತ್ತ್ ಯಾದವ್ ಅವರ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ, ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಆದೇಶಿಸಿದೆ. ವಿಚಾರಣೆ ಸಂದರ್ಭ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಕ್ರಿಮಿನಲ್ ಪ್ರಾಸಿಕ್ಯೂಷನ್ ಆಫ್ ಕಂಡಕ್ಟ್ ಆಫ್ ಪಬ್ಲಿಕ್ ಸರ್ವೆಂಟ್ಸ್ (ಕೋಕಾ) ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಆರೋಪದಡಿ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ, ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸುವಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ. ಶಾಸಕರ ಬಂಧನ ಸಾಧ್ಯತೆಯ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗು ತ್ತಿದೆ. ಈ ಪ್ರಕರಣದಿಂದ ಬಿಜೆಪಿಗೂ ಮುಜುಗರ ಉಂಟಾಗುವ ಸಾಧ್ಯತೆಯಿದೆ. ಹೈಕೋರ್ಟ್ ತೀರ್ಪಿನ ನಂತರ ಶಾಸಕರು ವಿಚಾರಣಾ ನ್ಯಾಯಾಲಯದಲ್ಲಿ ಮತ್ತೆ ಅರ್ಜಿ ಸಲ್ಲಿಸಬೇಕಾಗಿದೆ.


