ಬೆಳಗಾವಿ: ಇಂದೂ ನಾನೇ ಮುಖ್ಯಮಂತ್ರಿ, ಮುಂದೇಯೂ ನಾನೇ ಮುಖ್ಯಮಂತ್ರಿ, ನನ್ನ ಪ್ರಕಾರ ಹೈಕಮಾಂಡ್ ಬೆಂಬಲವೂ ನನ್ನ ಪರವಾಗಿ ಇದೆ. ನಾನೇ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿ ಇರ್ತೀನಿ. ಮುಂದಿನ ಬಾರಿ ಕೂಡ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುವಿಧಾನಸಭೆಯ ಅಧಿವೇಶನದ ಕೊನೆಯ ದಿನ ಶುಕ್ರವಾರ ವಿರೋಧ ಪಕ್ಷಗಳಿಗೆ ಖಡಕ್ ಸಂದೇಶ ನೀಡಿದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್ ಅವರು ಸಿಎಂ ಕುರ್ಚಿ ಕಾಳಗದ ಕುರಿತು ಪ್ರಸ್ತಾಪ ಮಾಡುತ್ತಿದ್ದಂತೆ ಕೆರಳಿದ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ಎರಡೂವರೆ ವರ್ಷಗಳಿಗೆ ಸಿಎಂ ಬದಲಾವಣೆ ಕುರಿತು ಯಾವುದೇ ಚರ್ಚೆಯೇ ಆಗಿಲ್ಲ. ವಿರೋಧ ಪಕ್ಷದವರು ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಕೆ ನೀಡಿದರು.
ಸಿಎಂ ಬದಲಾವಣೆ ಮಾಡುವ ವಿಚಾರ ನಮ್ಮ ಪಕ್ಷದ ಆಂತರಿಕ ವಿಚಾರ ಆಗಿದೆ. ನಿಮಗೆ ಯಾಕೆ, ನಮ್ಮ ಹೈಕಮಾಂಡ್ ಇದೆ. ಈ ವಿಚಾರ ನಿಮಗೆ ಬೇಡ, ಚರ್ಚೆಯ ವಿಷಯವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬೇಡಿ. ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ವಿಷಯ ನಿಮಗೆ ಬೇಡ ಎಂದು ಅಶೋಕ್ ಅವರಿಗೆ ಟಾಂಗ್ ಕೊಟ್ಟರು.
ಈ ವೇಳೆ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ಮುಖ್ಯಮಂತ್ರಿಗಳೇ ನೀವೂ ಯಾವಾಗಲೂ ನಿಮ್ಮದೇ ಸ್ಟೈಲ್ ನಲ್ಲಿ ಹೇಳ್ತಿರಲ್ಲ, ಸಡ್ಡು ಹೋಡೆದು ಉತ್ತರ ಕೊಡ್ತೀರಲ್ಲ ಹಾಗೇ ಸಡ್ಡು ಹೊಡೆದು 5 ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿ ಬಿಡಿ ಎಂದರು.
ಈ ವೇಳೆ ಮತ್ತೆ ಕೆರಳಿದ ಸಿಎಂ ಸಿದ್ದರಾಮಯ್ಯ, ನಿಮ್ಮ ಪಕ್ಷದ ಅಧ್ಯಕ್ಷರೂ ಹಾಗೂ ವಿರೋಧ ಪಕ್ಷದ ನಾಯಕರೂ ಪೂರ್ಣಾವಧಿಗೆ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರಾ ಹೇಳಿ ಬಿಡಿ ಎಂದು ಸವಾಲು ಹಾಕಿದರು.
ಶಾಸಕ ಸುನೀಲ ಕುಮಾರ್ ಮಾತನಾಡಿ, ಹೌದು ಆರ್ ಅಶೋಕ್ ಅವರೇ ವಿರೋಧ ಪಕ್ಷದ ನಾಯಕರಾಗಿ ಮುಂದೆವರೆಯುತ್ತಾರೆ ಎಂದು ನಾವು ಘಂಟಾಘೋಷವಾಗಿ ಹೇಳುತ್ತೇವೆ. ನಿಮಗೆ ಅನುಮಾನ ಬೇಡ ಎಂದು ಹೇಳಿದರು.
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಮಾತನಾಡಿ, ಸಿದ್ದರಾಮಯ್ಯ ಅವರೇ ನೀವೂ ಮುಖ್ಯಮಂತ್ರಿ ಆಗಿ ಇರ್ತೇನಿ ಎಂದು ಹೇಳಿ, ಇಲ್ಲವೇ ಎರಡೂವರೆ ವರ್ಷಕ್ಕೆ ಬದಲಾವಣೆ ಆಗತೀರಿ ಎಂಬ ಚರ್ಚೆ ನಿಮ್ಮ ಪಕ್ಷದವರ ಕಡೆಯಿಂದಲೇ ಬರುತ್ತಿದೆ ಎಂದರು.


